ಮುಂಬಯಿ: ಮುಂದಿನ ವರ್ಷ ನಡೆಯುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2025) (ಡಬ್ಲ್ಯುಪಿಎಲ್) ಆಟಗಾರ್ತಿಯರ ರೀಟೈನ್ ಪಟ್ಟಿ(wpl 2025 retention) ಸಲ್ಲಿಸುವ ದಿನಾಂಕವನ್ನು ಬಿಸಿಸಿಐ ಮತ್ತಷ್ಟು ವಿಸ್ತರಿಸಿದೆ. ಫ್ರಾಂಚೈಸಿಗಳಿಗೆ ನವೆಂಬರ್ 7ರ ಗಡುವು ನೀಡಿದೆ. ಈ ಮೊದಲು ಅಕ್ಟೋಬರ್ 15ರ ಗಡುವು ನೀಡಿತ್ತು. ರಿಟೈನ್ ಪಟ್ಟಿ ಸಲ್ಲಿಕೆ ಬಳಿಕ ಮಿನಿ ಹರಾಜು ದಿನಾಂಕವನ್ನು ಬಿಸಿಸಿಐ ಪ್ರಕಟಿಸಲಿದೆ. ಮಿನಿ ಹರಾಜಿನ ಪರ್ಸ್ ಮೊತ್ತ 15 ಕೋಟಿ ಆಗಿದೆ.
ವಿದೇಶದಲ್ಲಿ ಐಪಿಎಲ್ ಮೆಗಾ ಹರಾಜು
ಐಪಿಎಲ್-2025ರ ಆವೃತ್ತಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ರಿಯಾಧ್ ಅಥವಾ ಜೆಡ್ಡಾ ನಗರದಲ್ಲಿ ನಡೆಯುವ ನಿರೀಕ್ಷೆಯಿದೆ. ಆಟಗಾರರ ರಿಟೇನ್ ನಿಯಮಾವಳಿಯನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದೆ. ಸದ್ಯ ಎಲ್ಲ ತಂಡಗಳು ಮೆಗಾ ಹರಾಜಿಗೆ ಸಿದ್ಧತೆ ಆರಂಭಿಸಿದೆ. ರಿಟೇನ್ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಡಿಸೆಂಬರ್ 1ರಂದು ಐಸಿಸಿಯ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುನ್ನ ನವೆಂಬರ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಯೋಜನೆಯಾಗಿದೆ. ಮೆಗಾ ಹರಾಜು ಪ್ರಕ್ರಿಯೆ(IPL Auction) ನವೆಂಬರ್ 3 ಅಥವಾ 4ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2025: ಆರ್ಟಿಎಂ ನಿಯಮ ಬದಲಾವಣೆಗೆ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ ಮಾಲಕರು
ಪ್ರತಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್ ಮಾಡಿದರೆ, ಹರಾಜಿನಲ್ಲಿ 3 ಆರ್ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.
ಈ ಹಿಂದೆ ಇದ್ದ ಆರ್ಟಿಎಂ ನಿಯಮದ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಈಗಾಗಲೇ ಈ ಬಗ್ಗೆ ಫ್ರಾಂಚೈಸಿಗಳು ಅಪಸ್ವರವೆತ್ತಿದೆ.