ಲಕ್ನೋ: ತಿನ್ನುವ ಆಹಾರದಲ್ಲಿ ಕೆಲವು ಕಿಡಿಗೇಡಿಗಳು ಉಗುಳಿ(Spitting in food) ಅದನ್ನು ಕೊಳಕು ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಈ ರೀತಿ ಹೀನ ಕೃತ್ಯ ಎಸಗುವವರಿಗೆ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವಂತಹ ಕಾನೂನು ತರಲು ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸರ್ಕಾರ ಮುಂದಾಗಿದೆ.
ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುವ ಕೃತ್ಯಕ್ಕೆ ಅತಿ ಕಠಿಣ ಕಾನೂನು ಕ್ರಮ ಜರುಗಿಸಲು ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಸುಗ್ರಿವಾಜ್ಞೆ ಜಾರಿಗೊಳಿಸಲಿದೆ. ಆಮೂಲಕ ಈ ಕೃತ್ಯ ಎಸಗುವವರಿಗೆ ಹತ್ತುವರ್ಷಗಳ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ. ಸಾಮಾನ್ಯವಾಗಿ ಇಂತಹ ಶಿಕ್ಷೆಯನ್ನು ಕೊಲೆ ಅತ್ಯಾಚಾರ ಪ್ರಕರಣಗಳಲ್ಲಿ ಮಾತ್ರ ನೀಡಲಾಗುತ್ತದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ತರಪ್ರದೇಶದಲ್ಲಿ ತಲೆದೋರಿರುವ ವಾಯುಮಾಲಿನ್ಯ ಸಮಸ್ಯೆ ಮತ್ತು ಆಹಾರಗಳಲ್ಲಿ ಉಗುಳುವುದು, ಮೂತ್ರ ವಿಸರ್ಜಿಸುವ ಕೃತ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿಗೊಳಿಸಲು ಯೋಗಿ ಸರ್ಕಾರ ಸುಗ್ರಿವಾಜ್ಞೆ ತರುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೊಸ ಸುಗ್ರೀವಾಜ್ಞೆಗಳು ಮಾನವ ಆಹಾರವನ್ನು ಕಲುಷಿತಗೊಳಿಸುವುದು ಮತ್ತು ಉಗುಳುವ ಕೃತ್ಯಕ್ಕೆ ಸುಮಾರು 10 ವರ್ಷಗಳ ಶಿಕ್ಷೆ ವಿಧಿಸುವ ಬಗ್ಗೆ ಇದೆ. ಮಾನವ ತ್ಯಾಜ್ಯ ಮತ್ತು ಕೊಳಕು ಪದಾರ್ಥಗಳೊಂದಿಗೆ ಆಹಾರವನ್ನು ಕಲುಷಿತಗೊಳಿಸುವುದು ಘೋರ ಅಪರಾಧವಾಗಿದೆ ಮತ್ತು ನಾವು ಶೀಘ್ರದಲ್ಲೇ ಬಲವಾದ ಕಾನೂನನ್ನು ತರುತ್ತೇವೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಹಾರ ಮತ್ತು ಪಾನೀಯ ಮಾರಾಟಗಾರರ ಬಗ್ಗೆ ಅಗತ್ಯ ವಿವರಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು. ಆದ್ದರಿಂದ, ಅಂತಹ ಎಲ್ಲಾ ಮಾರಾಟಗಾರರು ಸೈನ್ಬೋರ್ಡ್ಗಳನ್ನು ಹಾಕಬೇಕು. ಎಲ್ಲಾ ಸಿಬ್ಬಂದಿ ಗುರುತಿನ ಚೀಟಿಗಳನ್ನು ಹೊಂದಿರಬೇಕು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಕೆಲವು ಮಾರಾಟಗಾರರು ಆಹಾರದ ಮೇಲೆ ಉಗುಳುವುದು ಅಥವಾ ಹಣ್ಣಿನ ರಸ ಮತ್ತು ಆಹಾರದಲ್ಲಿ ಮೂತ್ರವನ್ನು ಬೆರೆಸುತ್ತಿದ್ದಾರೆ ಎಂಬ ಆರೋಪದ ವಿವಾದದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಯೋಗ ಗುರು ಬಾಬಾ ರಾಮದೇವ್ ಕೂಡಿದೇ ವಿಚಾರವಾಗಿ ಧ್ವನಿ ಎತ್ತಿದ್ದರು. ಆಹಾರ ಪದಾರ್ಥ ಮತ್ತು ಪಾನೀಯಗಳಲ್ಲಿ ಕೊಳಕು ವಸ್ತುಗಳನ್ನು ಬೆರಸುವುದನ್ನು ಖಂಡಿಸಬೇಕೆಂದು ಮುಸ್ಲಿಂ ಧಾರ್ಮಿಕ ನಾಯಕರಿಗೆ ಕರೆ ನೀಡಿದ್ದರು. ದೇಶದ ಹಲವೆಡೆಗಳಿಂದ ಆಹಾರ ಪದಾರ್ಥಗಳಲ್ಲಿ ‘ಕೊಳಕು ವಸ್ತುಗಳನ್ನು’ ಬೆರೆಸುತ್ತಿರುವುದು, ಕೆಲವು ಕಿಡಿಗೇಡಿಗಳು ಉಗುಳುತ್ತಿರುವ ವಿಡಿಯೊಗಳು ಕೋಲಾಹಲಕ್ಕೆ ಕಾರಣವಾದ ನಂತರ ರಾಮ್ದೇವ್ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಧಾರ್ಮಿಕ ಮುಖಂಡರು ಮುಂದೆ ಬಂದು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ರಾಮದೇವ್ ಬಾಬಾ ಹೇಳಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಧಾರ್ಮಿಕ ಮುಖಂಡರು ಮೌನ ವಹಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು. ಇಂತಹ ವಿಚಾರಗಳನ್ನು ಹುರುಪಿನಿಂದ ವಿರೋಧಿಸಬೇಕು, ಇದೆಲ್ಲವೂ ಸುಸಂಸ್ಕೃತ ಸಮಾಜಕ್ಕೆ ಕಳಂಕದಂತಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ-ನಾಲ್ಕನೇ ಆರೋಪಿ ಅರೆಸ್ಟ್