ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 57ನೇ ಸಿಸಿಎಚ್ ನ್ಯಾಯಾಲಯವು ಜಾಮೀನು ವಜಾಗೊಳಿಸಿದ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅಕ್ಟೋಬರ್ 22 ಕ್ಕೆ ನಟ ದರ್ಶನ್ (Actor Darshan) ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿದೆ. ನ್ಯಾಯಮೂರ್ತಿ ಎಸ್ .ವಿಶ್ವಜಿತ್ ಅವರನ್ನೊಳಗೊಂಡ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.
ದರ್ಶನ್ ಪರ ವಕೀಲರು ಮಂಗಳವಾರ ಅರ್ಜಿ ಸಲ್ಲಿಸಿದ್ದರು. ನಟ ದರ್ಶನ್ ಪರ ವಾದ ಮಂಡನೆ ಮಾಡಲಿರುವ ವಕೀಲ ಎಸ್.ಸುನೀಲ್ ಅವರು, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಪೀಠಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆ ಅಕ್ಟೋಬರ್ 22 ಕ್ಕೆ ಕೋರ್ಟ್ ನಿಗದಿ ಮಾಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನಿನ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ವಜಾಗೊಳಿಸಿದ್ದರದ ನಟ ದರ್ಶನ್ಗೆ ನಿರಾಸೆಯಾಗಿತ್ತು. ಹೀಗಾಗಿ ಅವರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಸುದ್ದಿಯನ್ನೂ ಓದಿ | Online Betting apps: ಆನ್ಲೈನ್ ರಮ್ಮಿ, ಬೆಟ್ಟಿಂಗ್ ಆ್ಯಪ್ಗಳ ನಿಷೇಧಕ್ಕೆ ಆಗ್ರಹ; ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ
ರೇಣುಕಾ ಸ್ವಾಮಿ ಪತ್ನಿಗೆ ಗಂಡು ಮಗು ಜನನ
ಚಿತ್ರದುರ್ಗ: ಬೆಂಗಳೂರಿನಲ್ಲಿ ನಟ ದರ್ಶನ್ (Actor Darshan) ಗ್ಯಾಂಗ್ನಿಂದ ಕೊಲೆಯಾದ ಚಿತ್ರದುರ್ಗದ (Chitradurga news) ರೇಣುಕಾ ಸ್ವಾಮಿಯ (Renuka Swamy Murder Case) ಪತ್ನಿಗೆ ಗಂಡು ಮಗು ಜನಿಸಿದೆ. ರೇಣುಕಾ ಸ್ವಾಮಿ ಸಾವಿಗೀಡಾದಾಗ ಅವರು ಐದು ತಿಂಗಳ ಗರ್ಭಿಣಿ ಆಗಿದ್ದರು.
ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೇಣುಕಾ ಸ್ವಾಮಿ ಪತ್ನಿ ಸಹನಾಗೆ ಹೆರಿಗೆ ಆಗಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ಪ್ರಕರಣ ಕೋರ್ಟ್ ಅಂಗಳದಲ್ಲಿ ಇದೆ. ಪ್ರಮುಖ ಆರೋಪಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಹಾಗೂ ಪವಿತ್ರಾ ಗೌಡ ಮತ್ತಿತರರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನಿನ್ನೆ ಇವರಿಬ್ಬರ ಜಾಮೀನು ತಿರಸ್ಕೃತಗೊಂಡಿತ್ತು.
ರೇಣುಕಾ ಸ್ವಾಮಿ ಕೊಲೆಯ ಬಳಿಕ ಆತನ ಕುಟುಂಬ ಮಾಧ್ಯಮಗಳ ಮುಂದೆಯೂ ಕಣ್ಣೀರಿಡುತ್ತ ಬಂದಿದೆ. ‘ಮಗ ಕೈ ಮುಗಿದು ಕೇಳಿಕೊಂಡಾಗ ಅವರು ಬಿಟ್ಟುಬಿಡಬೇಕಿತ್ತು’ ಎಂದು ತಂದೆ-ತಾಯಿ ಕಣ್ಣೀರು ಹಾಕಿದ್ದರು. ನೊಂದಿದ್ದ ಕುಟುಂಬಕ್ಕೆ ಖುಷಿಪಡುವಂಥ ಸುದ್ದಿ ಇದಾಗಿದೆ. ಅನುಕಂಪದ ಆಧಾರದಲ್ಲಿ ರೇಣುಕಾಸ್ವಾಮಿ ಪತ್ನಿಗೆ ಕೆಲಸ ನೀಡಬೇಕು ಎಂಬ ಬೇಡಿಕೆಯೂ ಇದೆ.