Saturday, 23rd November 2024

Dinesh Gundurao: ಮಂಗನ ಕಾಯಿಲೆಗೆ ಕೊನೆಗೂ ಔಷಧ! ಮಾನವರ ಮೇಲೆ ಲಸಿಕೆ ಪ್ರಯೋಗಕ್ಕೆ ನಿರ್ಧಾರ

Dinesh Gundurao

ಬೆಂಗಳೂರು: ಕೆಎಫ್.ಡಿ ಲಸಿಕೆ (KFD Vaccine) ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao), ದೆಹಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ದೆಹಲಿ ಪ್ರವಾಸದಲ್ಲಿರುವ ಸಚಿವರು, ಐಸಿಎಂಆರ್‌ ಡಿಸಿ ಅವರನ್ನು ಭೇಟಿ ಮಾಡಿ, ಕೆಎಫ್.ಡಿ ಲಸಿಕೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ವಿತ್ತೀಯ ನೆರವು ಒದಗಿಸುವಂತೆ ಕೋರಿದರು.

ಮೊದಲ ಹಂತದ ಪ್ರಯೋಗದಲ್ಲಿ ಕೆ.ಎಫ್.ಡಿ ಲಸಿಕೆ ಭರವಸೆ ಮೂಡಿಸಿದ್ದು, ಕಾಲಮಿತಿಯೊಳಗೆ ಲಸಿಕೆ ಲಭ್ಯತೆ ಅಗತ್ಯವಾಗಿದೆ. ಲಸಿಕೆಯ ಎರಡನೇ ಹಂತವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 2025ರ ಏಪ್ರಿಲ್ ತಿಂಗಳಲ್ಲಿ ಲಸಿಕೆಯ ಮಾನವ ಪ್ರಯೋಗಗಳನ್ನು ನಡೆಸಲು ಯೋಜಿಸಲಾಗಿದ್ದು, 2026 ರಲ್ಲಿ ಲಸಿಕೆ ಬಳಕೆಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ಒದಗಿಸುವಂತೆ ಐಸಿಎಂಆರ್‌ (ICMR) ನಿರ್ದೇಶಕರಿಗೆ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | World Food Day 2024: ಇಂದು ವಿಶ್ವ ಆಹಾರ ದಿನ; ಸುಸ್ಥಿರ ಪದ್ಧತಿಗಳಿಂದ ಮಾತ್ರವೇ ನಮಗೆ ಉಳಿವು!

ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ ಮೆಚ್ಚುಗೆ

ಭೇಟಿ ವೇಳೆ ರಾಜ್ಯದ ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ ಐಸಿಎಂಆರ್‌ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜು ಮಕ್ಕಳನ್ನು ರಕ್ತಹೀನತೆ ತಪಾಸಣೆಗೆ ಒಳಪಡಿಸುತ್ತಿರುವುದು ಉತ್ತಮ ಯೋಜನೆ ಎಂದಿದ್ದಾರೆ. ಅಲ್ಲದೇ ಭಾರತ ಸರ್ಕಾರದ ರಕ್ತ ಹೀನತೆ ಮುಕ್ತ ಭಾರತ್ 2.0 ಯೋಜನೆಗೆ ಅನುಗುಣವಾಗಿ ಯೋಜನೆ ವಿಸ್ತರಿಸುವಂತೆ ಸಚಿವರಲ್ಲಿ ವಿನಂತಿಸಿದರು.

ರಾಜ್ಯದಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಂಡಿರುವ ನವೀನ ತಂತ್ರಜ್ಞಾನಗಳ ಬಗ್ಗೆ ಆಸಕ್ತಿ ತೋರಿದ ಐಸಿಎಂಆರ್‌ ನಿರ್ದೇಶಕರು, ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ದೇಶದ ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಐಸಿಎಂಆರ್‌ ನಿರ್ದೇಶಕರು ಸಚಿವರಿಗೆ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Cauvery Phase 5: ಮಹತ್ವಾಕಾಂಕ್ಷಿ ‘ಕಾವೇರಿ 5ನೇ ಹಂತದ ಯೋಜನೆ’ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಆರೋಗ್ಯ ಸೇವೆಗಳ ಉತ್ತಮ ವಿತರಣೆಗಾಗಿ ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುವಲ್ಲಿ ಪರಸ್ಪರ ಸಹಕರಿಸುವ ನಿಟ್ಟಿನಲ್ಲಿ ಭೇಟಿ ವೇಳೆ ಚರ್ಚೆ ನಡೆಸಲಾಯಿತು. ಸಚಿವರ ಜತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ, ಎನ್‌ಎಚ್‌ಎಂ ಎಂ.ಡಿ‌ ನವೀನ್ ಭಟ್ ಉಪಸ್ಥಿತರಿದ್ದರು.