ಬೆಂಗಳೂರು: ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ (Bengaluru Rain) ರಾಜಧಾನಿಯ ಹಲವು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಮಾನ್ಯತಾ ಟೆಕ್ ಪಾರ್ಕ್ ಭಾಗದಲ್ಲಂತೂ ರಸ್ತೆಗಳು ಕೆರೆಗಳಂತೆ ಬದಲಾಗಿ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ನಡುವೆ ಯಲಹಂಕ ಸಮೀಪದ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಕೂಡ ಜಲಾವೃತವಾಗಿರುವುದು ಕಂಡುಬಂದಿದ್ದು, ಮಾಲ್‌ನ ಪಾರ್ಕಿಂಗ್ ಸ್ಥಳ ಮತ್ತು ಪ್ರವೇಶದ್ವಾರದಲ್ಲಿ ಅಪಾರ ಪ್ರಮಾಣದ ನೀರು ನಿಂತು ಸಮಸ್ಯೆ ಉದ್ಭವಿಸಿದೆ.
ಮಾಲ್ ಆವರಣದಲ್ಲಿ ಭಾರಿ ಪ್ರಮಾಣದ ನೀರು ತುಂಬಿರುವ ಬಗ್ಗೆ ನೆಟ್ಟಿಗರೊಬ್ಬರು ವಿಡಿಯೊ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೈಗೌಡ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದೇನೆ. ನಾವು ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 60 ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಅಗತ್ಯವಿದ್ದರೆ ಇನ್ನೂ 40 ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
2023ರಲ್ಲಿ ಈ ಮಾಲ್ ಪ್ರಾರಂಭವಾದಾಗಿನಿಂದ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಲೇ ಬರುತ್ತಿದೆ. ಕಳೆದ ವರ್ಷ ಈ ಮಾಲ್ ಇರುವ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ 15 ದಿನಗಳ ಕಾಲ ಮಾಲ್ ಮುಚ್ಚುವಂತೆ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಮಾಲ್‌ನ ಪಾರ್ಕಿಂಗ್ ಅವ್ಯವಸ್ಥೆಯಿಂದ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಪೊಲೀಸರು ಕ್ರಮ ಕೈಗೊಂಡಿದ್ದರು.
Mr. Byre. Instead of tweeting go near Mall of Asia and clear the water! Saw this on WA groups and was shocked to see it! And you’re busy tweeting! pic.twitter.com/knQoP7OTv9
— Karthik M Bhat (@ikarthikmb) October 15, 2024
ರಚ್ಚೆ ಹಿಡಿದ ಮಳೆ; ಬೆಂಗಳೂರಿಗರಿಗೆ ಸಹಾಯವಾಣಿ ಓಪನ್
ಬೆಂಗಳೂರು: ಮೊನ್ನೆ ರಾತ್ರಿ ಆರಂಭವಾದ ಮಳೆ ಬೆಂಗಳೂರು ಸುತ್ತಮುತ್ತ (Bengaluru Rain) ಒಂದೇ ಒಂದು ನಿಮಿಷ ಬಿಡುವು ಕೊಡದೆ ರಚ್ಚೆ ಹಿಡಿದಂತೆ (Bangalore rain news) ಬಾರಿಸುತ್ತಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಟ್ರಾಫಿಕ್ ಗೊಂದಲ (Traffic Jam) ಸೃಷ್ಟಿಯಾಗಿದೆ. ಮಳೆ ಅವಾಂತರ ಸಂಬಂಧಿತ ದೂರುಗಳಿದ್ದರೆ ಬಿಬಿಎಂಪಿಯ ಸಹಾಯವಾಣಿ (BBMP Helpline) ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದೆ.
ನಗರದಲ್ಲಿ ಭಾರೀ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಮಳೆಯ ಕಾರಣದಿಂದಾಗಿ ಇಂದು ಬೆಂಗಳೂರಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಗದೀಶ್ ರಜೆಯನ್ನು ಘೋಷಿಸಿ ಆದೇಶಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ಅಕ್ಟೋಬರ್ 16 ಮತ್ತು 17 ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಮಳೆಯಿಂದಾಗಿ ಏನಾದರು ಸಮಸ್ಯೆಗಳಿದ್ದರೆ ನಾಗರೀಕರು ಕೂಡಲೆ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ದೂರು ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ನಗರದ 8 ವಲಯ ವ್ಯಾಪ್ತಿಯಲ್ಲಿ 8 ನಿಯಂತ್ರಣ ಕೊಠಡಿಗಳಿದ್ದು, ಪಾಲಿಕೆ ಕೇಂದ್ರ ಕಛೇರಿಯಲ್ಲಿ 1 ನಿಯಂತ್ರಣ ಕೊಠಡಿಯಿದೆ. ದೂರಗಳನ್ನು ಸಂಬಂಧಪಟ್ಟ ವಲಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿದೆ.
ಇದನ್ನೂ ಓದಿ: Karnataka Weather: ಇಂದು ಬೆಂಗಳೂರು, ಹಾಸನ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!
ಈ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 16 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐ ಗಳಿಗೆ ರಜೆ ಇರುವುದಿಲ್ಲ.