ನವದೆಹಲಿ: ಇಡೀ ಕಾಂಗ್ರೆಸ್ ಪಕ್ಷವೇ (Congress Party) ಭೂ ಹಗರಣದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಎಐಸಿಸಿ (AICC) ಅಧ್ಯಕ್ಷರ ಕುಟುಂಬ, ಮುಖ್ಯಮಂತ್ರಿ ಕುಟುಂಬ, ಸಚಿವರಾದಿಯಾಗಿ ಭೂ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸೋನಿಯಾ, ರಾಹುಲ್ ಗಾಂಧಿದ್ವಯರು ಬೇಲ್ ಮೇಲೆ ಇದ್ದಾರೆ ಎಂದು ತಿಳಿಸಿದರು.
ಸ್ವತಃ ಗಾಂಧಿ ಕುಟುಂಬಸ್ಥರೇ ಹಗರಣಗಳಲ್ಲಿ ಮುಳುಗಿದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ಎಂದು ಸಚಿವ ಜೋಶಿ ವ್ಯಂಗ್ಯವಾಡಿದರು.
ಈ ಸುದ್ದಿಯನ್ನೂ ಓದಿ | R Ashok: ಕಾವೇರಿ 5ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ; ಆರ್. ಅಶೋಕ್ ಪ್ರತಿಪಾದನೆ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೇಲ್ ಮೇಲಿದ್ದರಿಂದ ಸಿದ್ದರಾಮಯ್ಯನವರ ರಾಜೀನಾಮೆ ಕೇಳಲು ಅವರಿಗೆ ಮುಖವಿಲ್ಲ ಎಂದು ಹೇಳಿದರು.
ಬೆಲೆ ತೆರಲೇಬೇಕು ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣ ಮಾತ್ರವಲ್ಲ, ವಾಲ್ಮೀಕಿ ನಿಗಮದಲ್ಲಿ 89 ಕೋಟಿ ರೂಪಾಯಿ ಲಪಟಾಯಿಸಿದ್ದಾರೆ. ಇದಕ್ಕೆಲ್ಲಾ ಸಿಎಂ ಅವರೇ ಉತ್ತರ ಕೊಡಬೇಕು ಮತ್ತು ಮಾಡಿದ ಅಪರಾಧಕ್ಕೆ ತಕ್ಕ ಬೆಲೆ ತೆರಬೇಕು ಎಂದು ಅವರು ತಿಳಿಸಿದರು.
ತನಿಖೆ ಅಗತ್ಯ ಎಂದು ಹೈಕೋರ್ಟ್ ಹೇಳಿದೆ
ಸಿಎಂ ವಿರುದ್ಧದ ಮುಡಾ ಹಗರಣದಲ್ಲಿ ತನಿಖೆ ಅಗತ್ಯ ಎಂದು ಹೈಕೋರ್ಟ್ ಹೇಳಿದೆ. ಸಿಎಂ ಪ್ರಭಾವ ಇಲ್ಲದೆ, ಕುಟುಂಬಕ್ಕೆ ನಿವೇಶನ ಹಂಚಿಕೆಯಲ್ಲಿ ಮುಡಾ ಸ್ವಂತ ನಿರ್ಣಯ ಅಸಾಧ್ಯ. ಹಾಗಾಗಿ ಇದರ ತನಿಖೆ ಅವಶ್ಯಕ ಎಂದೇ ಕೋರ್ಟ್ ಹೇಳಿದೆ ಎಂದರು.
ಇನ್ನು, ವಾಲ್ಮೀಕಿ ನಿಗಮದಲ್ಲೂ ಅಷ್ಟೇ, ಚುನಾವಣೆ ವೇಳೆ ಹಣಕಾಸು ಸಚಿವರೂ ಆಗಿರುವ ಸಿಎಂ ಗಮನಕ್ಕೆ ಬರದೇ ವಿವಿಧ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!
ಬಿಜೆಪಿ ಹೋರಾಟ ನಿಲ್ಲಿಸಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ ಜೋಶಿ, ಹಗರಣಗಳ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.