ಮೈಸೂರು: ಮುಡಾ ಹಗರಣದ (Muda Case) ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸ್ನೇಹಮಯಿ ಕೃಷ್ಣ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಾ ಲೋಕಾಯುಕ್ತ ಪೊಲೀಸರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಸ್ನೇಹಮಯಿ ಕೃಷ್ಣ ಅವರ ಸಹಾಯದಿಂದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಎಂ.ಲಕ್ಷ್ಮಣ್ ಅವರು, ನ್ಯಾಯಾಲಯದ ಆದೇಶದ ಪ್ರಕಾರ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಆದರೆ ದೂರುದಾರ ಸ್ನೇಹಮಯಿ ಕೃಷ್ಣ ದಿನನಿತ್ಯ ಲೋಕಾಯುಕ್ತ ಕಚೇರಿ ಬಳಿ ಬಂದು ಮುಖ್ಯಮಂತ್ರಿಗಳು ಸಾಕ್ಷ್ಯನಾಶ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಆರೋಪ ಮಾಡುತ್ತಾರೆ. ನಾನು ದಿನನಿತ್ಯ ಲೋಕಾಯುಕ್ತ ಕಚೇರಿಗೆ ಬರುತ್ತೇನೆ ಎಂದು ಸುಳ್ಳು ದೂರು ನೀಡಿದ್ದಾರೆ. ಅದಕ್ಕಾಗಿ ನಾವು ಅವರ ವಿರುದ್ಧ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಾ ಲೋಕಾಯುಕ್ತ ಪೊಲೀಸರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಸ್ನೇಹಮಯಿ ಕೃಷ್ಣ ಅವರ ಸಹಾಯದಿಂದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ದೂರು ನೀಡಿದ್ದೇವೆ, ದಯಮಾಡಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸ್ನೇಹಮಯಿ ಕೃಷ್ಣನನ್ನು ಕೂಡಲೇ ಬಂಧಿಸಿ ತನಿಖೆ ಮುಗಿಯುವವರೆಗೂ ಬಿಡಬಾರದು. ನಮಗಿರುವ ಮಾಹಿತಿ ಪ್ರಕಾರ ಅವರು ಫೇಕ್ ಸೀಲ್‌ಗಳನ್ನು ಬಳಸಿ ದಾಖಲಾತಿಗಳನ್ನು ಸೃಷ್ಟಿಸಿ ಲೋಕಾಯುಕ್ತ ಕಚೇರಿಗೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸಮನ್ಸ್ ನೀಡಿದ ದಿನ ಮಾತ್ರ ಕಚೇರಿಗೆ ಬರಬೇಕು. ಸುಳ್ಳು ದಾಖಲೆಗಳು ಮತ್ತು ತಪ್ಪು ಹೇಳಿಕೆಗಳ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮುಖ್ಯಮಂತ್ರಿಗಳ ಮೇಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ಮೋದಿ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ