ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸೂರ್ಯ ಘರ್ ಯೋಜನೆ ಅಡಿಯಲ್ಲಿ 400,000ಕ್ಕೂ ಹೆಚ್ಚು ಸೌರ ಘಟಕಗಳನ್ನು (Rooftop Solar Units) ಅಳವಡಿಸುವ ಮೂಲಕ ಭಾರತವು ತನ್ನ ಚಾವಣಿ ಸೌರ ಶಕ್ತಿ ಅಳವಡಿಕೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಪ್ರಾರಂಭಿಸಿದ ಮತ್ತು ಫೆಬ್ರವರಿಯಲ್ಲಿ ಸರ್ಕಾರವು ಹಸಿರು ನಿಶಾನೆ ತೋರಿದ ಈ ಯೋಜನೆಯು ಕಟ್ಟಡಗಳ ಚಾವಣಿಯಲ್ಲಿ ಸೌರ ಘಟಕಗಳನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡುತ್ತದೆ. ಈ ಮೂಲಕ ದೇಶಾದ್ಯಂತ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಲಾಗಿದೆ.
ನವದೆಹಲಿಯಲ್ಲಿ ಬುಧವಾರ ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಈ ಮೈಲಿಗಲ್ಲು ಪ್ರಕಟಿಸಿದರು. ಸೌರ ವಿದ್ಯುತ್ನಲ್ಲಿ ಭಾರತದ ಪ್ರಭಾವಶಾಲಿ ಬೆಳವಣಿಗೆಯನ್ನು ಅವರು ಬೊಟ್ಟು ಮಾಡಿದರು. ಈ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ನಡುವೆ 17 ಗಿಗಾವ್ಯಾಟ್ ಗಿಂತಲೂ ಹೆಚ್ಚಿನ ವಿದ್ಯುತ್ ಸಂಗ್ರಹಿಸಲಾಗಿದೆ.
ಕಳೆದ ವಾರ, ಭಾರತವು ಪ್ರಧಾನ ಮಂತ್ರಿಗಳ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ನಾಲ್ಕು ಲಕ್ಷ ಸ್ಥಾಪನೆಗಳನ್ನು ಸಾಧಿಸಿದೆ” ಎಂದು ಜೋಶಿ ಹೇಳಿದರು. “ಭಾರತದ ಒಟ್ಟು ವಿದ್ಯುತ್ ಸಾಮರ್ಥ್ಯದ 20% ಸೌರ ಶಕ್ತಿಯನ್ನು ಹೊಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 26% ಕ್ಕಿಂತ ಹೆಚ್ಚಿನ ಬೆಳವಣಿಗೆಯಾಗಿದೆ. ಸೌರಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೃಷ್ಟಿಕೋನ ಹೊಂದಲಾಗಿದೆ,” ಎಂದು ಹೇಳಿದರು.
ಚಾವಣಿ ಸೌರ ಘಟಕಗಳು ಜಾಗತಿಕ ಪ್ರವೃತ್ತಿಯಾಗಿ ಮಾರ್ಪಟ್ಟಿವೆ. ಅನೇಕ ದೇಶಗಳು ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಂಡಿವೆ. ಐಎಸ್ಎ ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಮತ್ತು ಬಾಂಗ್ಲಾದೇಶದಂತಹ ದೇಶಗಳಿಗೆ ಚಾವಣಿ ಸೌರ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಇಥಿಯೋಪಿಯಾದಲ್ಲಿ ಪ್ರಾಯೋಗಿಕ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂದು ಐಎಸ್ಎ ಮಹಾನಿರ್ದೇಶಕ ಅಜಯ್ ಮಾಥುರ್ ಹೇಳಿದ್ದಾರೆ.
ಇದನ್ನೂ ಓದಿ: Pralhad Joshi: ಮೋದಿ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಐಎಸ್ಎ ಸದಸ್ಯ ರಾಷ್ಟ್ರಗಳಲ್ಲಿ ಸೌರ ಹೂಡಿಕೆಗೆ ಅಡ್ಡಿಯಾಗಿರುವ ಹಣಕಾಸು ಸವಾಲುಗಳ ಬಗ್ಗೆ ಉತ್ತರಿಸಿದ ಅವರು, ಆದಾಯದ ಬಗ್ಗೆ ಕಳವಳದಿಂದ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ ಎಂದು ಮಾಥುರ್ ಒಪ್ಪಿಕೊಂಡರು.