ಬೆಂಗಳೂರು: ಹಿಜಾಬ್ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ದ ಅನಗತ್ಯ ಟ್ವೀಟ್ ಮಾಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ನಟ ಚೇತನ್ ಕುಮಾರ್ ಅಹಿಂಸಾಗೆ (Actor Chetan) 5ಸಾವಿರ ರೂ. ದಂಡ ವಿಧಿಸಲಾಗಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ₹5,000 ದಂಡ ವಿಧಿಸುವ ಮೂಲಕ ಅವರ ವಿರುದ್ಧ ಹೊರಡಿಸಿದ್ದ ಜಾಮೀನುರಹಿತ ವಾರೆಂಟ್ ಕೋರ್ಟ್ ಹಿಂಪಡೆದಿದೆ.
ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್ ಭಾರದ್ವಾಜ್ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ವಿಭಾಗೀಯ ಪೀಠ ದಂಡ ವಿಧಿಸಿತು.
ನ್ಯಾಯಾಲಯದಲ್ಲಿ ಹಾಜರಿದ್ದ ಚೇತನ್ ಪರ ವಕೀಲ ಕಾಶಿನಾಥ್ ಜೆ ಡಿ ಅವರು 14.09.2024ರಂದು ಹೊರಡಿಸಿರುವ ಜಾಮೀನುರಹಿತ ವಾರೆಂಟ್ ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಆದರೆ, ಚೇತನ್ಗೆ ₹5,000 ರೂ. ದಂಡ ವಿಧಿಸಿದ್ದು, ಅದನ್ನು ಹೈಕೋರ್ಟ್ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯ ಘಟಕಕ್ಕೆ ಪಾವತಿಸಬೇಕು ಎಂದು ಆದೇಶಿಸಿತು.
ಇದನ್ನೂ ಓದಿ: Actor Darshan : ದರ್ಶನ್ಗಾಗಿ ಬಳ್ಳಾರಿ ಜೈಲಿಗೆ ಆರ್ಥೋ ಹಾಸಿಗೆ, ದಿಂಬು ಸರಬರಾಜು
ಎರಡನೇ ಆರೋಪಿಯಾಗಿರುವ ಚೇತನ್ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸುವ ಮೂಲಕ ಅವರನ್ನು ನ್ಯಾಯಾಲಯದ ಮುಂದೆ ಬರುವಂತೆ ಮಾಡಿ ₹75,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಪಡೆಯಲಾಗಿತ್ತು. ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಬಾಂಡ್ ರದ್ದಾಗಲಿದೆ ಎಂದು ಆದೇಶಿಸಲಾಗಿತ್ತು. ಆದೇಶ ಪಾಲಿಸಲು ವಿಫಲವಾಗಿದ್ದರಿಂದ ಚೇತನ್ ಜಾಮೀನು ರದ್ದಾಗಿದ್ದು, ಹೊಸದಾಗಿ ಅವರು ₹1,00,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಭದ್ರತೆಯನ್ನು ಹೈಕೋರ್ಟ್ನ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ಒಂದು ವಾರದೊಳಗೆ ಒದಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ನಟ ಚೇತನ್, ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಎಜಿ ಸಮ್ಮತಿ
ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ವಿಳಂಬವಾಗಿದ್ದು ಅರ್ಜಿ ಅನೂರ್ಜಿತವಾಗಲಿದೆ ಎಂದು ಒಂದನೇ ಆರೋಪಿ ಆರ್ ರಹಮತುಲ್ಲಾ ಪರ ವಕೀಲ ಎ ವೇಲನ್ ಆಕ್ಷೇಪಿಸಿದರು. ಇದಕ್ಕೆ ಪೀಠವು ಈ ಹಂತದಲ್ಲಿ ಅದನ್ನು ಪರಿಗಣಿಸಲಾಗದು ಎಂದಿತು. ವಿಚಾರಣೆಯನ್ನು ನವೆಂಬರ್ 6ಕ್ಕೆ ನಿಗದಿಗೊಳಿಸಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ ಮಧುಸೂದನ್ ಅಡಿಗ ವಾದಿಸಿದರು.