ರಾಮಾಯಣ ಮಹಾಕಾವ್ಯದ ಕರ್ತೃವಾದ ವಾಲ್ಮೀಕಿ ಮಹರ್ಷಿಯ ಜನ್ಮ ದಿನವನ್ನು ಆಶ್ವಯುಜ ಶುದ್ಧ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷದಲ್ಲಿ ಅಕ್ಟೋಬರ್ 17 ರಂದು ಆಶ್ವಯುಜ ಪೌರ್ಣಮಿ ಬಂದಿದ್ದು, ವಾಲ್ಮೀಕಿ ಜಯಂತಿ (Valmiki Jayanti 2024) ಆಚರಿಸಲಾಗುತ್ತಿದೆ. ಮೂಲದಲ್ಲಿ ವ್ಯಾಧನಾಗಿದ್ದು, ಕುಕೃತ್ಯಗಳನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ನಾರದ ಮುನಿಯ ಉಪದೇಶದಿಂದ ಪರಿವರ್ತನೆಗೊಂಡು, ರಾಮನ ಸಾಕ್ಷಾತ್ಕಾರಕ್ಕಾಗಿ ತಪವನ್ನಾಚರಿಸಿದ. ಆತನ ಸುತ್ತಲೂ ಹುತ್ತ (ವಲ್ಮೀಕ) ಬೆಳೆದು, ಅದನ್ನಾತ ಹರಿದು ಹೊರಬಂದು ವಾಲ್ಮೀಕಿ ಋಷಿ ಎನಿಸಿದರು ಎನ್ನುತ್ತವೆ ಪುರಾಣಗಳು.
ರಾಮಾಯಣದ ರಚನೆಯ ಹಿಂದೆ ಇನ್ನೊಂದು ಆಸಕ್ತಿಕರ ಕಥೆಯೂ ಇದೆ. ತಮಸಾ ನದಿಯ ತೀರದಲ್ಲಿ ಅರ್ಘ್ಯವನ್ನು ನೀಡುತ್ತಿದ್ದಾಗ, ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಯ ಜೋಡಿಯನ್ನು ವಾಲ್ಮೀಕಿ ಮುನಿಗಳು ಕಾಣುತ್ತಾರೆ. ಅದೇ ಸಮಯಕ್ಕೆ ಬೇಡನೊಬ್ಬ ಬಂದು ಗಂಡು ಹಕ್ಕಿಗೆ ಬಾಣ ಹೊಡೆದು ಕೊಲ್ಲುತ್ತಾನೆ. ಇದರಿಂದ ಸಂಕಟ ತಡೆಯಲಾರದ ಹೆಣ್ಣು ಹಕ್ಕಿಯು ಹೃದಯ ವಿದ್ರಾವಕವಾಗಿ ಶೋಕಿಸುತ್ತದೆ. ಆ ಹಕ್ಕಿಯ ಸಂಕಟವನ್ನು ಕಂಡ ವಾಲ್ಮೀಕಿಯ ಬಾಯಲ್ಲಿ ಶೋಕವೇ ಛಂದೋಬದ್ಧವಾದ ಶ್ಲೋಕವಾಗಿ ಹರಿದುಬರುತ್ತದೆ. ಆ ಬೇಡನನ್ನು ವಾಲ್ಮೀಕಿ ಮುನಿ ಶಪಿಸಲು ಮುಂದಾದಾಗ, ಬ್ರಹ್ಮದೇವನೇ ಋಷಿಯ ಆಶ್ರಮಕ್ಕೆ ಬಂದು, ಶ್ಲೋಕವನ್ನು ಉದ್ಗರಿಸಿದಂತೆಯೇ, ಇಡೀ ರಾಮಾಯಣದ ಕಥೆಯನ್ನು ರಚಿಸುವಂತೆ ಪ್ರೇರೇಪಿಸುತ್ತಾನೆ. ಈ ರೀತಿಯಲ್ಲಿ ವಾಲ್ಮೀಕಿ ಮುನಿಯಿಂದ ರಾಮಾಯಣ ರಚನೆಗೊಂಡಿತು ಎನ್ನಲಾಗುತ್ತದೆ.
ರಾಮಾಯಣದಲ್ಲಿ ಒಂದು ಪಾತ್ರ
ಆಸಕ್ತಿಕರ ವಿಷಯವೆಂದರೆ, ಇದೇ ವಾಲ್ಮೀಕಿ ಮುನಿ ಉತ್ತರ ರಾಮಾಯಣದಲ್ಲಿ ಒಂದು ಪಾತ್ರವಾಗಿಯೂ ಬರುತ್ತಾರೆ. ಗರ್ಭಿಣಿಯಾಗಿದ್ದ ಸೀತೆಯನ್ನು ರಾಮನ ಆದೇಶದ ಮೇರೆಗೆ ಲಕ್ಷ್ಮಣ ಕಾಡಿನಲ್ಲಿ ಬಿಡುವಾಗ, ವಾಲ್ಮೀಕಿ ಆಶ್ರಮದ ಸಮೀಪದಲ್ಲೇ ಬಿಡುತ್ತಾನೆ. ಮುಂದೆ, ಇದೇ ಋಷಿಯ ಆಶ್ರಮದಲ್ಲಿ ರಾಮ-ಸೀತೆಯ ಅವಳಿ ಮಕ್ಕಳಾದ ಲವ-ಕುಶರು ಜನ್ಮ ತಾಳುತ್ತಾರೆ. ಅವರಿಂದಲೇ ಈ ಮಕ್ಕಳ ಪಾಲನೆ, ವಿದ್ಯಾಭ್ಯಾಸಗಳು ನಡೆಯುತ್ತವೆ. ರಾಮನಿಗೆ ಈ ಮಕ್ಕಳನ್ನು ಒಪ್ಪಿಸುವವರೆಗೂ ಅವರು ವಾಲ್ಮೀಕಿ ಋಷಿಗಳು ಆಶ್ರಮದಲ್ಲೇ ಇರುತ್ತಾರೆ.
ಈ ಸುದ್ದಿಯನ್ನೂ ಓದಿ | Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!
ಜೀವನಕಾಲ ಯಾವುದು?
ತ್ರೇತಾಯುಗದಲ್ಲಿ ಬದುಕಿದ್ದ ವಾಲ್ಮೀಕಿ ಮಹರ್ಷಿಯ ಜನ್ಮ ದಿನಾಂಕವನ್ನು ನಿಖರವಾಗಿ ಹೇಳುವುದಕ್ಕೆ ಸೂಕ್ತ ಆಧಾರಗಳಿಲ್ಲ. ಜತೆಗೆ, ಮುನಿಗಳು ಸಾವಿರಾರು ವರ್ಷ ಬದುಕಿದ್ದರೆನ್ನುತ್ತವೆ ಪುರಾಣಗಳು. ಆದರೆ ಆಶ್ವಯುಜ ಶುದ್ಧ ಪೂರ್ಣಿಮೆಯಂದು, ಮಹಾಕಾವ್ಯದ ಕವಿಯನ್ನು ನೆನಪಿಸಿಕೊಳ್ಳುವ ಸಂಪ್ರದಾಯ ಜಾರಿಯಲ್ಲಿದೆ. ಅಂದು ವಾಲ್ಮೀಕಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ಸಲ್ಲುತ್ತವೆ. ಕೆಲವೆಡೆ ರಾಮಾಯಣ ಪಠಿಸುವ ಪದ್ಧತಿಯಿದೆ. ಶೋಭಾಯಾತ್ರೆಗಳು, ಅನ್ನದಾನದ ಮೂಲಕವೂ ಅಂದು ವಾಲ್ಮೀಕಿ ಋಷಿಯನ್ನು ನೆನಪಿಸಿಕೊಳ್ಳಲಾಗುತ್ತದೆ. ಅಂದು ಭಾರತದ ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ರಜೆಯನ್ನೂ ನೀಡಲಾಗುತ್ತದೆ.