Friday, 25th October 2024

Talakaveri Temple: ಇಂದು ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ, ಜಾತ್ರೆ ಆರಂಭ

talkaveri

ಮಡಿಕೇರಿ: ನಾಡಿನ ಜೀವನದಿ ಕಾವೇರಿ (Kaveri River) ತೀರ್ಥೋದ್ಭವ ಇಂದು ಆಗಲಿದ್ದು, ಈ ಹಿನ್ನೆಲೆಯಲ್ಲಿ ತಲಕಾವೇರಿ (Talakaveri Temple) ಹಾಗೂ ಭಾಗಮಂಡಲ (Bhagamandala) ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ಭಕ್ತಾದಿಗಳು ಹರಿದು ಬರುತ್ತಿದ್ದಾರೆ. ಕೊಡವರ ಕುಲದೇವತೆ ಕಾವೇರಿ ಜಾತ್ರೆ ಕಳೆಕಟ್ಟಿದ್ದು, ಇಂದಿನಿಂದ ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.

ಅ.17ಕ್ಕೆ ತುಲಾ ಸಂಕ್ರಮಣ ನಡೆಯಲಿದ್ದು, ಈ ಬಾರಿ ಬೆಳಗ್ಗೆ 7.40 ಗಂಟೆಗೆ ತಲಕಾವೇರಿಯ ಬ್ರಹ್ಮ ಕುಂಡದಲ್ಲಿ ಪುಣ್ಯ ತೀರ್ಥೋದ್ಭವ ಆಗಲಿದೆ. ತುಲಾ ಸಂಕ್ರಮಣ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ತುಲಾ ಸಂಕ್ರಮಣ ಜಾತ್ರೆ ಸಂಬಂಧ ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆಯನ್ನು ಅಗಲಗೊಳಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar), ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕರಾದ ಎ.ಎಸ್‌. ಪೊನ್ನಣ್ಣ, ಡಾ| ಮಂತರ್‌ ಗೌಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯಲ್ಲಿಈ ಬಾರಿ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆ ಮಾರ್ಗದ ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವಾಗಿದೆ. ಪವಿತ್ರ ಬ್ರಹ್ಮಕುಂಡಿಕೆ ಮತ್ತು ಕೊಳದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ನೂಕು ನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್: ಈ ಬಾರಿ ಹೆಚ್ಚು ಜನರ ಆಗಮನದ ನಿರೀಕ್ಷೆ ಇದ್ದು ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಎಸ್‌ಪಿ ಎಎಸ್‌ಪಿ ಸುಂದರ್‌ ರಾಜ್‌ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.

ಭಕ್ತರಿಗೆ ಉಚಿತ ಬಸ್‌ ಸೇವೆ: ಕಳೆದ ಬಾರಿಯಂತೆ ಈ ಸಲವೂ ಭಾಗಮಂಡಲ ಹಾಗೂ ತಲಕಾವೇರಿ ನಡುವೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಹಾಗೂ ತಲಕಾವೇರಿಯಿಂದ- ಭಾಗಮಂಡಲಕ್ಕೆ 15 ಬಸ್‌ಗಳು ಓಡಾಡುತ್ತಿದ್ದು, ಭಕ್ತಾದಿಗಳು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಮೆಹಬೂಬ್‌ ಅಲಿ ಮಾಹಿತಿ ನೀಡಿದ್ದಾರೆ. ಪರಿಸರ ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂದಾಯ, ಪೊಲೀಸ್‌, ಪಂಚಾಯತ್‌ ರಾಜ್‌, ಸೆಸ್ಕ್‌, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿಆಗಬೇಕಿರುವ ಕೆಲಸಗಳನ್ನು ಕೈಗೊಂಡಿದ್ದಾರೆ. ಕೊಡವ ಸಂಘಟನೆಗಳ ಪಾದಯಾತ್ರೆಯೂ ನಡೆಯಲಿದೆ.

ಇದನ್ನೂ ಓದಿ: Talakaveri Temple: ತಲಕಾವೇರಿಯಲ್ಲಿ ನಾಳೆ ಪವಿತ್ರ ತೀರ್ಥೋದ್ಭವ