Friday, 22nd November 2024

Supreme Court CJI: ಜಸ್ಟಿಸ್ ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ?

SC CJI

ನವದೆಹಲಿ: ಸುಪ್ರೀಂಕೋರ್ಟ್‌(Supreme Court CJI)ನ 50ನೇ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌(CJI Chandrachud) ಅವರು ಇನ್ನೇ ನು ಕೆಲವೇ ದಿನಗಳ‍‍‍ಲ್ಲಿ ನಿವೃತರಾಗುತ್ತಿದ್ದು, ಇದೀಗ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗೆ ಕುತೂಹಲ ಮೂಡಿದೆ. ಚಂದ್ರಚೂಡ್‌ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ಸಿಜೆಐ ಸ್ಥಾನವನ್ನು ನ್ಯಾಯನೂರ್ತಿ ಸಂಜೀವ್‌ ಖನ್ನಾ ಅಲಂಕರಿಸಲಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ. ಇನ್ನು ಈಗಾಗಲೇ ತಮ್ಮ ಉತ್ತರಾಧಿಕಾರಿಯನ್ನಾಗಿ ಜಸ್ಟೀಸ್‌ ಸಂಜೀವ್‌ ಖನ್ನಾ ಅವರನ್ನು ನೇಮಿಸುವಂತೆ ಶಿಫಾರಸ್ಸು ಮಾಡಿ ಡಿ.ವೈ. ಚಂದ್ರಚೂಡ್‌ ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಇದೊಂದು ಸಾಂಪ್ರದಾಯಿಕ ಪ್ರಕ್ರಿಯೆಯಾಗಿದ್ದು, ನಿವೃತ್ತಿಯಾಗುತ್ತಿರುವ ಮುಖ್ಯನ್ಯಾಯಮೂರ್ತಿ ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿದ್ದಾರೆ. ಅವರ ಅನುಮೋದನೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತದೆ. DY ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದು, CJI ಆಗಿ ಅವರ ಅಧಿಕಾರಾವಧಿಯು ನವೆಂಬರ್ 10 ರಂದು ಕೊನೆಗೊಳ್ಳುತ್ತದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು 65 ನೇ ವಯಸ್ಸಿಗೆ ನಿವೃತ್ತರಾಗುತ್ತಾರೆ. ಇನ್ನು ಅವರ ನಂತರ ಹಿರಿಯ ನ್ಯಾಯಮೂರ್ತಿಯಾಗಿರುವ ಸಂಜೀವ್‌ ಖ‍ನ್ನಾ ಅವರನ್ನೇ ಮುಂದಿನ ಸಿಜೆಐ ಆಗಿ ನೇಮಿಸುವಂತೆ ಚಂದ್ರಚೂಡ್‌ ನಾಮನಿರ್ದೇಶನ ಮಾಡಿದ್ದಾರೆ.

ಜಸ್ಟಿಸ್‌ ಸಂಜೀವ್ ಖನ್ನಾ ಯಾರು?

ಅವರು 1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿ ಸಂಜೀವ್‌ ಖನ್ನಾ ತೀಸ್ ಹಜಾರಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು. ನಂತರ, ಅವರು ದೆಹಲಿಯ ಹೈಕೋರ್ಟ್ ಮತ್ತು ನ್ಯಾಯಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜಸ್ಟಿಸ್ ಖನ್ನಾ ಅವರು ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದರು ಮತ್ತು 2004 ರಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸ್ಥಾಯಿ ಸಲಹೆಗಾರ (ಸಿವಿಲ್) ಆಗಿದ್ದರು.

2005 ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದರು ಮತ್ತು 2006 ರಲ್ಲಿ ಖಾಯಂ ನ್ಯಾಯಾಧೀಶರಾದರು. ನ್ಯಾಯಮೂರ್ತಿ ಖನ್ನಾ ಅವರು ಅಧ್ಯಕ್ಷರು/ನ್ಯಾಯಾಧೀಶರು, ದೆಹಲಿ ಜುಡಿಶಿಯಲ್ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳಂತಹ ಸ್ಥಾನಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಜನವರಿ 18, 2019 ರಂದು, ಅವರು ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗುವ ಮೊದಲೇ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಭಡ್ತಿ ಹೊಂದಿದ್ದರು. ಅವರು ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: CJI Chandrachud: ನ.10ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್‌ ಸಿಜೆಐ ಡಿ.ವೈ. ಚಂದ್ರಚೂಡ್ ಹಿನ್ನೆಲೆ ಹೀಗಿದೆ