ಬೆಳಗಾವಿ: ಬೆಳಗಾವಿಯ (Belagavi news, Belagavi Crime news) ಶ್ರೀಮಂತ ಉದ್ಯಮಿಯೊಬ್ಬರು (Businessman death) ಸಾವಿಗೀಡಾಗಿದ್ದು, ಸಾವಿನ ಬಗ್ಗೆ ಅವರ ಮಗಳು ಸಂಶಯ ವ್ಯಕ್ತಪಡಿಸಿದ್ದಾರೆ. ತಾಯಿಯ ಮೇಲೆ ಅನುಮಾನಪಟ್ಟಿದ್ದು, ಆಕೆ ಸೇರಿದಂತೆ ನಾಲ್ವರ ಮೇಲೆ ದೂರು (Murder Case) ನೀಡಿದ್ದಾರೆ.
ಆರು ದಿನಗಳ ಹಿಂದೆ ಬೆಳಗಾವಿಯ ಆಂಜನೇಯ ನಗರದ ನಿವಾಸಿ, ಆಗರ್ಭ ಶ್ರಿಮಂತ, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಸಾವು ಸಂಭವಿಸಿತ್ತು. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಅವರ ಪತ್ನಿ ಉಮಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ತನಿಖೆಯಿಲ್ಲದೆ ಅಂತ್ಯಕ್ರಿಯೆ ನಡೆದಿತ್ತು.
ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷರ ಪುತ್ರಿ ಸಂಜನಾ, ಅಂತ್ಯಕ್ರಿಯೆಯ ಬಳಿಕ ಮನೆಯೊಳಗಿನ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೇಳಿದ್ದಾರೆ. ಆಗ ಉಮಾ, ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬಾ ಹೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಾಳೆ. ಬಳಿಕ ಬಂದು ಸಿಸಿಟಿವಿ ಫೂಟೇಜ್ ಪಡೆದ ಮಗಳಿಗೆ, ಸಾವು ಸಂಭವಿಸಿದ ಒಂದು ಗಂಟೆಯ ಅವಧಿ ಫೂಟೇಜ್ ದೊರೆತಿಲ್ಲ. ಅದು ಡಿಲೀಟ್ ಆಗಿದೆ ಎಂಬ ಉತ್ತರ ಬಂದಿದೆ.
ಇದರಿಂದ ಸಂಶಯಗೊಂಡಿರುವ ಸಂಜನಾ, ತಂದೆಯ ಸಾವು ಸಹಜವಲ್ಲ, ಕೊಲೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಮಾಳಮಾರುತಿ ಠಾಣೆಯಲ್ಲಿ ತಾಯಿ ಉಮಾ ಸೇರಿದಂತೆ 4. ಜನರ ಮೇಲೆ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಸಂತೋಷನ ಎದುರ ಮನೆಯ ಸಿಸಿ ಕ್ಯಾಮರಾ ಫೂಟೇಜ್ ಚೆಕ್ ಮಾಡಿದ್ದಾರೆ. ಆಗ ರಾತ್ರಿ ಸಮಯದಲ್ಲಿ ಸಂತೋಷ್ ಮನೆಯಿಂದ ಇಬ್ಬರು ಪುರುಷರು ಹೋಗುವ ದೃಶ್ಯ ಸೆರೆಯಾಗಿದೆ.
ಅಕ್ಟೋಬರ್ 9ರಂದು ಅಸಹಜ ಸಾವು ಸಂಭವಿಸಿದೆ. ತನಿಖೆಗೆ ತಿರುವು ದೊರೆತಿರುವ ಹಿನ್ನೆಲೆಯಲ್ಲಿ, ಸ್ಮಶಾನದಲ್ಲಿ ಹೂತಿದ್ದ ಸಂತೋಷ್ ಮೃತದೇಹ ಹೊರತೆಗೆಯಲಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ.
ಸಂತೋಷ ತನ್ನ ಪತ್ನಿ ಉಮಾಗೆ ನಿರಂತರ ಕಿರುಕುಳ ಕೊಡುತ್ತಿದ್ದುದಲ್ಲದೆ, ಜೊತೆಗೆ ನಡತೆ ಬಗ್ಗೆ ಸಂಶಯ ಪಡುತ್ತಿದ್ದರು ಎನ್ನಲಾಗಿದೆ. ಉಮಾಗೆ ಸೋಶಿಯಲ್ ಮೀಡಿಯಾದಲ್ಲಿ ಆತ್ಮೀಯ ಗೆಳೆಯನಿದ್ದಾನೆ ಎಂದೂ ಹೇಳಲಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಾವಿನ ಹಿಂದೆ ಅನೈತಿಕ ಸಂಬಂಧ, ಆಸ್ತಿ ಕಬಳಿಸುವ ಸಂಚನ್ನು ಕೂಡ ಶಂಕಿಸಲಾಗಿದೆ. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಇದನ್ನೂ ಓದಿ: Liam Payne Death: ‘ಒನ್ ಡೈರೆಕ್ಷನ್’ ಬ್ಯಾಂಡ್ ಗಾಯಕ ಲಿಯಾಮ್ ಪೇನ್ ಹೋಟೆಲ್ ಬಾಲ್ಕನಿಯಿಂದ ಬಿದ್ದು ಸಾವು