Monday, 18th November 2024

Viral Video: ಕಾರಿಡಾರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ; ಆಘಾತಕಾರಿ ವಿಡಿಯೊ

Viral Video

ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ದಂಡಿಸುವ ಅಧಿಕಾರ ಶಿಕ್ಷಕರಿಗಿರುತ್ತದೆ. ಅಂದಮಾತ್ರಕ್ಕೆ ಮನಬಂದಂತೆ ವಿದ್ಯಾರ್ಥಿಗಳನ್ನು ಥಳಿಸುವ ಅಧಿಕಾರ ಶಿಕ್ಷಕರಿಗಿಲ್ಲ. ತೆಲಂಗಾಣದ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಯೊಬ್ಬನನ್ನು ನೆಲದ ಮೇಲೆ ಎಳೆದಾಡುತ್ತಾ ಆತನ ಬೆನ್ನಿಗೆ ಹೊಡೆದು ನಿರ್ದಯವಾಗಿ ಥಳಿಸುತ್ತಿರುವ ದೃಶ್ಯ ಶಾಲೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದ್ದು, ಅನೇಕರು ಶಿಕ್ಷಕನ ವಿರುದ್ಧ ಕಿಡಿಕಾರಿದ್ದಾರೆ.

ಕೊಥಗುಡೆಮ್ ಜಿಲ್ಲೆಯ ಗೊಲ್ಲಗುಡೆಮ್‍ನ ಭದ್ರಾದ್ರಿ ಮಾನಸ ವಿಕಾಸ ಶಾಲೆಯ ಶಿಕ್ಷಕನೊಬ್ಬ ತನ್ನ ಸಹಪಾಠಿಗಳ ಜೊತೆ ಕಾರಿಡಾರ್‌ನಲ್ಲಿ ನಿಂತುಕೊಂಡಿದ್ದ ವಿದ್ಯಾರ್ಥಿಯ ಬೆನ್ನಿಗೆ ಬಲವಾಗಿ ಹೊಡೆದಿದ್ದಾನೆ. ವಿದ್ಯಾರ್ಥಿ ನೋವಿನಿಂದ ಅಳುತ್ತಾ ಅವನ ಬೆನ್ನನ್ನು ಹಿಡಿದುಕೊಂಡಿದ್ದಾನೆ. ಆದರೆ ಶಿಕ್ಷಕನು ಅವನ ಕೈಗಳನ್ನು ಹಿಡಿದುಕೊಂಡು ವಿದ್ಯಾರ್ಥಿ ಗೋಗೆರೆಯುತ್ತಿದ್ದರೂ ಬಿಡದೆ ಮತ್ತೆ ಹೊಡೆದಿದ್ದಾನೆ.

ನಂತರ ಶಿಕ್ಷಕನು ವಿದ್ಯಾರ್ಥಿಯ ನೋಟ್ ಬುಕ್ ತೆಗೆದುಕೊಂಡು ನೆಲದ ಮೇಲೆ ಬಿಸಾಕಿ, ಅದನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗೆ ಹೇಳಿದ್ದಾನೆ. ನೋಟ್‌ ಬುಕ್‌ ತೆಗೆದುಕೊಳ್ಳಲು ಬಗ್ಗಿದಾಗ ಮತ್ತೆ ಅವನಿಗೆ ಹೊಡೆದಿದ್ದಾನೆ. ಕೊನೆಗೆ  ಅವನನ್ನು ನೆಲದ ಮೇಲೆ ಎಳೆದಾಡುತ್ತಾ ಭೀಕರವಾಗಿ ಥಳಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದನ್ನು ನೋಡಿ ಶಿಕ್ಷಕನ ಮೇಲೆ ಕಿಡಿಕಾರಿದ್ದಾರೆ. ಶಿಕ್ಷಕನ ಈ ನಡವಳಿಕೆಗೆ ಕಾರಣವೇನೆಂಬುದು ಗೊತ್ತಿಲ್ಲವಂತೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೈ ಏರಿದ ಹೆಬ್ಬಾವು! ವಿಡಿಯೊ ನೋಡಿ

ವರದಿ ಪ್ರಕಾರ, ಮನೆಗೆ ತಲುಪಿದ ನಂತರ ವಿದ್ಯಾರ್ಥಿ ಯಾವುದೇ ಕಾರಣವಿಲ್ಲದೆ ಶಿಕ್ಷಕ ಥಳಿಸಿದ್ದನ್ನು ತನ್ನ ಪೋಷಕರ ಬಳಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಆತನ ಪೋಷಕರು ಶಾಲೆಗೆ ಹೋಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಂತರ ಅವರು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರಂತೆ.