-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ಹುಡುಗಿಯಂತೆ ಮಿಸ್ ಇಂಡಿಯಾ ಕನಸು ಕಾಣುತ್ತಿದ್ದ, ನಿಖಿತಾ ಪೊರ್ವಾಲ್ ಕನಸು ಇದೀಗ ನನಸಾಗಿದೆ. ಅವರಿಗೆ ಆಕಾಶವೇ ಕೈಗೆ ಸಿಕ್ಕಿದಷ್ಟು ಖುಷಿಯಾಗಿದೆಯಂತೆ. ಕಳೆದ ಬಾರಿ ವಿಜೇತರಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದ, ನಂದಿನಿ ಗುಪ್ತಾ ಅವರಿಂದ ಟೈಟಲ್ ಹಾಗೂ ಫೆಮಿನಾ ಮಿಸ್ ಇಂಡಿಯಾ 2024 (Femina Miss India 2024) ಕಿರೀಟ ಮುಡಿಗೇರಿಸಿಕೊಂಡ ನಿಖಿತಾ ಪೊರ್ವಾಲ್, ನಂತರ ನಾನಾ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಫ್ಯಾಷನ್ ಹಾಗೂ ಪ್ಯಾಷನ್ ಕುರಿತಂತೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರಂಗಭೂಮಿ ಕಲಾವಿದೆ
ಮೂಲತಃ ಮಧ್ಯ ಪ್ರದೇಶದ ಉಜ್ಜೈನ್‌ನವರಾದ ನಿಖಿತಾ ಅವರು ರಂಗಭೂಮಿ ಕಲಾವಿದೆ. ಅಲ್ಲದೇ, ಸ್ಟೋರಿ ಟೆಲ್ಲರ್ ಕೂಡ. ಇದುವರೆಗೂ ಸರಿ ಸುಮಾರು 60 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ಮಾಡಿದ್ದಾರಂತೆ. ಸುಮಾರು 250 ಪೇಜ್‌ಗಳಿರುವ ಕೃಷ್ಣ ಲೀಲಾ ಎಂಬ ನಾಟಕವನ್ನು ಬರೆದು ರಂಗಕರ್ಮಿ ಎಂದೆನಿಸಿಕೊಂಡಿದ್ದಾರೆ. ಜತೆಗೆ ಪ್ರಾಣಿ ಸಂರಕ್ಷಣಾ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆನ್ನಲಾಗಿದೆ. ಅಚ್ಚರಿಯ ವಿಚಾರವೆಂದರೆ, ನಿಖಿತಾ ಇದುವರೆಗೂ ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿಲ್ಲವಂತೆ. ಇನ್ಮುಂದೆ ಇದರ ಅವಶ್ಯಕತೆ ಇದೆ ಎಂದುಕೊಂಡಿದ್ದಾರಂತೆ.
ನಿಖಿತಾ ಬಾಲಿವುಡ್‌ನ ಮತ್ತೊಂದು ಕನಸು
ನಿಖಿತಾ ಈಗಾಗಲೇ ಸಿನಿಮಾವೊಂದರಲ್ಲೂ ನಟಿಸಿದ್ದಾರಂತೆ. ಸದ್ಯ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿಲ್ಲವಂತೆ. ನಟನೆ ನನ್ನ ಪ್ಯಾಷನ್! ನಟನೆಯಲ್ಲಿ ತೊಡಗಿಸಿಕೊಳ್ಳಲು ನನಗೊಂದು ಐಡೆಂಟಿಟಿ ಬೇಕು. ಅದು ಮಿಸ್ ಇಂಡಿಯಾ ಟೈಟಲ್ ಕಲ್ಪಿಸಿದೆ. ಈ ಟೈಟಲ್ ಗೆದ್ದ ಸಾಕಷ್ಟು ಮಂದಿ ಈಗಾಗಲೇ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ನಾನು ಕೂಡ ಭವಿಷ್ಯದಲ್ಲಿ ಅದೇ ಹಾದಿಯಲ್ಲಿ ಸಾಗಬೇಕೆಂದುಕೊಂಡಿದ್ದೇನೆ. ಸಂಜಯ್ ಲೀಲಾ ಬನ್ಸಾಲಿಯವರಂತಹ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಬೇಕೆಂಬ ಮಹಾದಾಸೆಯಿದೆ ಎಂದು ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bagheera Movie: ಶ್ರೀಮುರಳಿಯ ‘ಬಘೀರ’ ಸಿನಿಮಾದ ರುಧಿರ ಧಾರ ಹಾಡು ಕೇಳಿ! ಇಲ್ಲಿದೆ ವಿಡಿಯೊ
ನಿಖಿತಾ ಫ್ಯಾಷನ್ ಲೋಕ
ಸದ್ಯ ನನಗೆ ಈ ಟೈಟಲ್ ವಿಜೇತಳಾಗಿರುವುದಕ್ಕೆ ಸಖತ್ ಖುಷಿಯಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪೇಜೆಂಟ್‌ಗೂ ರೆಡಿಯಾಗಬೇಕಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಹೆಚ್ಚಾಗಿ ಫಿಟ್ನೆಸ್ ಹಾಗೂ ಪ್ರತಿ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ಗಮನ ನೀಡಬೇಕಿದೆ. ಅಲ್ಲದೇ, ಇದರ ಜತೆಯೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕಾಗಿದೆ ಎಂದು ನಿಖಿತಾ ಹೇಳಿಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)