Friday, 18th October 2024

Yahya Sinwar : ಇಸ್ರೇಲ್ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸಾವು?

Yahya Sinwar

ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಮೂವರು ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ನಾಯಕ ಯಾಹ್ಯಾ ಸಿನ್ವರ್ (Yahya Sinwar) ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ. ಈ ಹಂತದಲ್ಲಿ ಭಯೋತ್ಪಾದಕರ ಗುರುತನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಮೂವರು ಉಗ್ರರು ಹತ್ಯೆಗೀಡಾದ ಕಟ್ಟಡದಲ್ಲಿ ಇಸ್ರೇಲಿ ಒತ್ತೆಯಾಳುಗಳು ಇರುವ ಯಾವುದೇ ಲಕ್ಷಣಗಳಿಲ್ಲ ಎಂದು ಅದು ಹೇಳಿದೆ. ಹಮಾಸ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಸಿನ್ವಾರ್ ಸಾವು ದೃಢಪಟ್ಟರೆ ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರಿಗೆ ಸಿಕ್ಕಿರುವ ದೊಡ್ಡ ಯಶಸ್ಸು ಎನಿಸಲಿದೆ.

ದಕ್ಷಿಣ ಗಾಝಾ ಪಟ್ಟಿಯ ರಾಫಾ ನಗರದಲ್ಲಿನ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಇಸ್ರೇಲ್‌ನ ಆರ್ಮಿ ರೇಡಿಯೋ ತಿಳಿಸಿದೆ. ಈ ಸಮಯದಲ್ಲಿ ಇಸ್ರೇಲಿ ಪಡೆಗಳು ಮೂವರು ಉಗ್ರರನ್ನು ಕೊಂದು ಅವರ ಶವಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಮೃತಪಟ್ಟಿರುವರಲ್ಲಿ ಒಬ್ಬರು ಸಿನ್ವಾರ್ ಆಗಿರಬಹುದು. ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅದು ಹೇಳಿದೆ. ಸಿನ್ವರ್ ಡಿಎನ್ಎ ಮಾದರಿಯನ್ನು ಸಂಗ್ರಹಿಸಲಾಗಿದೆ.

ಇದನ್ನೂ ಓದಿ: THAAD Anti Missile System: ಹೆಜ್ಬುಲ್ಲಾ ದಾಳಿಯ ತಡೆಗೆ ಯುಎಸ್‌ನಿಂದ ಇಸ್ರೇಲ್‌ಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ

ಗಾಜಾ ಯುದ್ಧಕ್ಕೆ ಕಾರಣವಾದ ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಮುಖ್ಯ ರೂವಾರಿ. ಯಾಹ್ಯಾ ಸಿನ್ವರ್ ಅಂದಿನಿಂದ ಇಸ್ರೇಲ್‌ನ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಆದರೆ ಕಳೆದ ಎರಡು ದಶಕಗಳಲ್ಲಿ ಗಾಝಾ ಅಡಿಯಲ್ಲಿ ಹಮಾಸ್ ನಿರ್ಮಿಸಿದ ಸುರಂಗಗಳ ಅಡಿಯಲ್ಲಿ ಅಡಗಿಕೊಂಡಿದ್ದ.

ಈ ಹಿಂದೆ ಗಾಝಾ ಪಟ್ಟಿಯಲ್ಲಿ ಹಮಾಸ್ ನಾಯಕನಾಗಿದ್ದ ಆತನನ್ನು ಆಗಸ್ಟ್‌ನಲ್ಲಿ ಟೆಹ್ರಾನ್‌ನಲ್ಲಿ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದಿದ್ದರು. 250 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಝಾಕ್ಕೆ ಕರೆದೊಯ್ದಿದ್ದರು. ಪ್ರತಿಕ್ರಿಯೆಯಾಗಿ ಇಸ್ರೇಲ್ 42,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಗಾಜಾದ ಹೆಚ್ಚಿನ ಭಾಗವನ್ನು ನೆಲಸಮಗೊಳಿಸಿದೆ.