ಅಪರ್ಣಾ ಎ. ಎಸ್ ಬೆಂಗಳೂರು
ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳಿಲ್ಲದೇ ಮುಚ್ಚಿದ ಕೋರ್ಸ್
ಹಲವು ಉದ್ಯೋಗಾವಕಾಶವಿದ್ದರೂ ಬಾರದ ವಿದ್ಯಾರ್ಥಿಗಳು
ಇತ್ತೀಚಿನ ದಿನದಲ್ಲಿ ಸಣ್ಣಪುಟ ಮಳೆಗೂ ಪ್ರವಾಹ ಸನ್ನಿವೇಶ ಸೃಷ್ಟಿಯಾಗುತ್ತಿರುವ ಈ ಸಮಯದಲ್ಲಿ ಈ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ಅತ್ಯಗತ್ಯ ಎನಿಸುವ ವಿಪತ್ತು ನಿರ್ವಹಣಾ ಸ್ನಾತಕೋತ್ತರ ಪದವಿಗೆ ಬೇಡಿಕೆ ಯಿಲ್ಲದೇ ಇಡೀ ಕೋರ್ಸ್ ಅನ್ನೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಕೆಲ ವರ್ಷದ ಹಿಂದೆ ಯುಜಿಸಿ ಮಾರ್ಗಸೂಚಿಯ ಅನ್ವಯ ಕರ್ನಾಟಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವಿಪತ್ತು ನಿರ್ವಹಣಾ ಕೋರ್ಸ್ನ್ನು ಆರಂಭಿಸಿತ್ತು. ಆದರೆ ಈ ಕೋರ್ಸಿನ ಮಹತ್ವ ಹಾಗೂ ಆರಂಭ ವಾಗಿರುವ ಬಗ್ಗೆ ಜನರಿಗೆ ಮಾಹಿತಿಯಿಲ್ಲದ ಕಾರಣ, ಆರಂಭಗೊಂಡ ಕೆಲವೇ ವರ್ಷದಲ್ಲಿ ವಿದ್ಯಾರ್ಥಿಗಳಿಲ್ಲದೇ ಕೋರ್ಸ್ ಅನ್ನೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ವಿಶ್ವವಿದ್ಯಾಲಯಗಳಲ್ಲಿ ವಿಪತ್ತು ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಲ ವರ್ಷದ ಹಿಂದೆ ಕೇಂದ್ರ ಸರಕಾರ ವಿಪತ್ತು ನಿರ್ವಹಣಾ ಕೋರ್ಸ್ ಗಳನ್ನು ಆರಂಭಿಸುವಂತೆ ದೇಶದ ಎಲ್ಲ ವಿವಿಗಳಿಗೆ ಯುಜಿಸಿ ಮೂಲಕ ಮಾರ್ಗಸೂಚಿ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ, ೨೦೧೮ರಲ್ಲಿ ವಿಪತ್ತು ನಿರ್ವಹಣಾ ಕೋರ್ಸ್ ಅನ್ನು ಭೂಗರ್ಭಶಾಸ್ತ್ರದ ವಿಭಾಗದಲ್ಲಿ ಆರಂಭಿಸಿತ್ತು.
ಆರಂಭದಲ್ಲಿ ನೂತನ ಕೋರ್ಸ್ ಆಗಿದ್ದ ಕಾರಣ ಕೆಲವೇ ಕೆಲವು ವಿದ್ಯಾರ್ಥಿಗಳು ಕೋರ್ಸ್ಗೆ ಸೇರ್ಪಡೆ ಮಾಡಿ ಕೊಂಡಿದ್ದರು. ೨೦೧೯ರಲ್ಲಿಯೂ ಕೇವಲ ೫-೬ ವಿದ್ಯಾರ್ಥಿಗಳು ಮಾತ್ರ ಈ ಕೋರ್ಸ್ಗೆ ಸೇರುವ ಉತ್ಸಾಹವನ್ನು ತೋರಿದ್ದರು. ಆ ಬಳಿಕ ಶೂನ್ಯ ದಾಖಲು ಎಂದು ೨೦೨೦ರ ವೇಳೆಗೆ ವಿಪತ್ತು ನಿರ್ವಹಣಾ ವಿಭಾಗವನ್ನೇ ಬಂದ್ ಮಾಡಬೇಕಾಗಿ ಬಂತು. ಆದರೆ ಆರಂಭವಾಗಿ ಎರಡು ವರ್ಷಕ್ಕೆ ಕೋರ್ಸ್ ಬಂದ್ ಆಗಿದ್ದು, ವಿದ್ಯಾರ್ಥಿಗಳಿಗಿದ್ದ ಮಾಹಿತಿಯ ಕೊರತೆ ಹಾಗೂ ಮಾನವ ಸಂಪನ್ಮೂಲದ ಕೊರತೆಯೇ ಇದಕ್ಕೆ ಕಾರಣ. ಮುಖ್ಯವಾಗಿ ಈ ಕೋರ್ಸ್ನ್ನು ನಾಲ್ಕು ಗೋಡೆಗಳ ಮಧ್ಯೆ ಕಲಿಸುವುದಕ್ಕಿಂತ ಪ್ರಾಯೋಗಿಕವಾಗಿ ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ವಿಭಾಗ ಮುಖ್ಯಸ್ಥರು ಹೇಳುತ್ತಾರೆ.
ಪ್ರಾಯೋಗಿಕ ಮಾಹಿತಿಗೆ ಶಿಕ್ಷಕರ ಕೊರತೆ: ಇಡೀ ಕೋರ್ಸ್ ಪ್ರಾಯೋಗಿಕವಾಗಿಯೇ ನಡೆಸಬೇಕಾದ ವಿಷಯ ವಾಗಿದೆ. ಆದ್ದರಿಂದ ನಾಲ್ಕು ಗೋಡೆಗಳ ಮಧ್ಯೆ ಕಲಿಸುವ ವಿಷಯವಲ್ಲ. ಅಗತ್ಯ ಪ್ರಾಯೋಗಿಕ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಇದಕ್ಕೆ ಅಗತ್ಯ ಪರಿಣತ ಶಿಕ್ಷಕರ ಅಗತ್ಯವಿದೆ. ಇನ್ನು ವಿದ್ಯಾರ್ಥಿಗಳಿರಬೇಕು. ಈ ವಿಶ್ವ ವಿದ್ಯಾಲ ಯಕ್ಕಾಗಿ ಭಾರಿ ಮೊತ್ತದ ಹೂಡಿಕೆ ಮಾಡಬೇಕಿದ್ದು, ವಿದ್ಯಾರ್ಥಿಗಳಿಲ್ಲದಿದ್ದರೆ ಹೊರೆಯಾಗಿ ಪರಿಣಮಿಸುತ್ತದೆ. ಅಧ್ಯಾಪಕರು ೨ ಗಂಟೆಗಳ ಕಾಲ ಬೋಧಿಸಿದರೆ ಮುಂದಿನ ಪ್ರಾಯೋಗಿಕ ಹಾಗೂ ಥಿಯರಿಯನ್ನು ಬೋಧಿಸು ವವರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ನಾವೂ ಕೋರ್ಸ್ನ್ನು ಬಂದ್ ಮಾಡಿ ಸುಮ್ಮನಿದ್ದೇವೆ ಎನ್ನುವ ಮಾತನ್ನು ಪ್ರಾಧ್ಯಾಪಕರು ಹೇಳುತ್ತಿದ್ದಾರೆ.
ಜಾಗೃತಿಯ ಕೊರತೆ
ವಿಶ್ವವಿದ್ಯಾಲಯಗಳಲ್ಲಿ ವಿಪತ್ತು ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿತ್ತು. ನೂತನ ಕೋರ್ಸ್ಯೆಂದು ಆರಂಭದಲ್ಲಿ ವಿದ್ಯಾರ್ಥಿಗಳ ಕೊರತೆಯಿತ್ತು. ಬಳಿಕ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಕುರಿತು ಸಮರ್ಪಕ ಮಾಹಿತಿಯ ಕೊರತೆಯಿಂದಾಗಿ ಅನೇಕರು ಹಿಂಜರಿಕೆಯಲ್ಲಿ
ದ್ದಾರೆ. ಅನೇಕ ವಿದ್ಯಾರ್ಥಿಗಳು ದಾಖಲು ಮಾಡಿ ಕೊಳ್ಳಲು ಆಗಮಿಸಿದವರು ಕೊನೆ ಕ್ಷಣದಲ್ಲಿ ಬೇರೆ ಕೋರ್ಸ್ನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಯಿತು ಎನ್ನುವ ಮಾತುಗಳು ಕೇಳಿ ಬಂದಿದೆ.
ಎಲ್ಲೆಲ್ಲಿ ಉದ್ಯೋಗಾವಕಾಶ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ
ಕೆಎಸ್ಡಿಎಂಸಿ, ಎನ್ಐಡಿಎಂ, ಎನ್ಡಿಎಂಎ, ಪಿಎಚ್ಎಫ್ ಐನಲ್ಲಿ ಉದ್ಯೋಗಾವಕಾಶ
ರೆಡ್ಆರ್ ಇಂಡಿಯಾ, ವಿಪತ್ತು ನಿರ್ವಹಣೆ ಸಲಹಾ ಸಂಸ್ಥೆಗಳು, ವಿಮಾ ಕಂಪನಿ
ಎನ್ಜಿಒ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದು.
*
ನಾನೂ ವಿವಿಯಲ್ಲಿ ವಿಪತ್ತು ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆ ಕೋರ್ಸ್ನ್ನು ಪುನಾರಂಭಿಸಲು ಸಿದ್ಧನಿದ್ದೇನೆ ಜತೆಗೆ ವಿವಿ ಹಾಗೂ ಎನ್ಐಡಿಎಂ ಕೂಡಾ ಕೋರ್ಸ್ ಆರಂಭಿಸಲು ಅಗತ್ಯ ಸಲಹೆ, ಸಹಕಾರ ನೀಡಲು ಮುಂದಾ ಗಿದೆ. ಆದರೆ ಈ ಕೋರ್ಸ್ನ ಬಗ್ಗೆ ಯಾರಿಗೂ ಮಾಹಿತಿ ತಿಳಿದಿಲ್ಲ. ಇದಕ್ಕೆ ಅಗತ್ಯ ಪ್ರಚಾರವೂ ದೊರೆತಿಲ್ಲ. ತುಂಬಾ ಜನರು ಬಂದು ಮಾಹಿತಿ ಕೇಳಿದರೂ ಕೂಡಾ ಯಾರೂ ಬಂದು ಸೇರಲು ಮುಂದಾಗುವುದಿಲ್ಲ. ಇನ್ನು ಅಗತ್ಯ ಮಾನವ ಸಂಪನ್ಮೂಲದ ಕೊರತೆ, ಉದ್ಯೋಗ ಅವಕಾಶವಿಲ್ಲದಿರುವುದೂ ಇನ್ನೊಂದು ಕಾರಣ. ಸದ್ಯ ಮಲ್ಟಿ ಡಿಸಿಪ್ಲಿನರಿ ಸಬ್ಜೆಕ್ಟ್ ಆಗಿ ಈ ಕೋರ್ಸ್ನ್ನು ಕಲಿಸಲಾಗುತ್ತಿದೆ.
—ಅಶೋಕ್ ಡಿ ಹಂಜಗಿ, ಡೀನ್, ವಿಜ್ಞಾನ ನಿಕಾಯ ಮತ್ತು ಭೂಗೋಳ ಶಾಸ್ತ್ರ ವಿಭಾಗ, ಬೆಂಗಳೂರು ವಿವಿ
ಇದನ್ನೂ ಓದಿ: Bangalore Hit and Run Case: ಭೀಕರ ಅಪಘಾತ; ಹಿಟ್ ಆ್ಯಂಡ್ ರನ್ಗೆ ಮೂವರು ವಿದ್ಯಾರ್ಥಿಗಳು ಬಲಿ