Monday, 25th November 2024

Prof R G Hegde Column: ಆತ್ಮವಿಶ್ವಾಸವನ್ನು ಅನುದಿನವೂ ಬೆಳೆಸಿಕೊಳ್ಳುವುದು ಹೇಗೆ ?

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ಮೊದಲಿಗೆ, ಆತ್ಮವಿಶ್ವಾಸವೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು; ಜತೆಗೆ, ಹಾಗೆಂದರೆ ಏನು ಅಲ್ಲ ಎಂಬುದನ್ನೂ ಅರಿಯಬೇಕು. ಆತ್ಮವಿಶ್ವಾಸ ಅಂದರೆ ಅಹಂಕಾರವಲ್ಲ. ‘ನಾನೇ ಸರ್ವಶ್ರೇಷ್ಠ, ಸರ್ವಸ್ವವೂ ನನಗೇ ಗೊತ್ತಿದೆ. ನಾನೇ ಇಂದ್ರ-ಚಂದ್ರ-ದೇವೇಂದ್ರ, ಉಳಿದವರೆಲ್ಲರೂ ಹುಲುಮಾನವರು’ ಎಂಬಂತೆ ಬಿಂಬಿಸುವ ಮಾತು ಅಥವಾ ನಡವಳಿಕೆ ಆತ್ಮವಿಶ್ವಾಸ ಅಲ್ಲವೇ ಅಲ್ಲ.

ಅದು ಧೀಮಾಕು, ಸೊಕ್ಕು ಅಥವಾ ಘಮಂಡಿ. ಕುತೂಹಲಕರ ಸಂಗತಿಯೆಂದರೆ ಇದು ‘ಇನೀರಿಯಾರಿಟಿ ಕಾಂಪ್ಲೆಕ್ಸ್’ ಅಥವಾ ‘ಕೀಳರಿಮೆ’ಯ ಇನ್ನೊಂದು ಮುಖವೇ! ಜನ ಇದನ್ನು ‘ಸುಪೀರಿಯಾರಿಟಿ ಕಾಂಪ್ಲೆಕ್ಸ್’ ಎಂದೇ ಭಾವಿಸುತ್ತಾರೆ. ಆದರೆ, ‘ಸುಪೀರಿಯಾರಿಟಿ ಎನ್ನುವ ಮಾನಸಿಕ ಸ್ಥಿತಿ ಇಲ್ಲವೇ ಇಲ್ಲ. ಧೀಮಾಕಿನ ನಡವಳಿಕೆಯು ಕೀಳರಿಮೆಯ ಇನ್ನೊಂದು ರೀತಿಯ ಅಭಿವ್ಯಕ್ತಿಯಷ್ಟೇ. ಆತ್ಮವಿಶ್ವಾಸ ಇಲ್ಲದವನು ದೊಡ್ಡವನಂತೆ ಕಾಣಿಸಿಕೊಳ್ಳಲು ಇಚ್ಛಿಸುತ್ತಾನೆ. ಆತನ ದೇಹಭಾಷೆಯು ‘ಆಕ್ರಮಣಕಾರಿ’ ಭಂಗಿಯಲ್ಲೇ ಇರುತ್ತದೆ. ಎಲ್ಲವನ್ನೂ, ಎಲ್ಲರನ್ನೂ ತಿರಸ್ಕರಿಸುತ್ತ ತಾನೇ ಶ್ರೇಷ್ಠ ಎನ್ನುವಂತೆ ಓಲಾಡುತ್ತಿರುತ್ತಾನೆ.

ಜನರೊಂದಿಗೆ ಸಲೀಸಾಗಿ ಬೆರೆಯುವುದಿಲ್ಲ, ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿರುತ್ತಾನೆ. ಪರರನ್ನು ಕೆಳಗೆ ತಳ್ಳಲು, ಅವಮಾನಿಸಲು ಕಾಯುತ್ತಲೇ ಇರುತ್ತಾನೆ. ಇವೆಲ್ಲ ಕೀಳರಿಮೆಯ ಮುಖಗಳಷ್ಟೇ. ಕೀಳರಿಮೆಗೆ ಇನ್ನೊಂದು ಮುಖವಿದೆ. ಕೀಳರಿಮೆಯ ವ್ಯಕ್ತಿಯು ಅತಿರೇಕವೆಂಬಂತೆ ಎಲ್ಲರೊಂದಿಗೂ ತಗ್ಗಿ-ಬಗ್ಗಿ ನಡೆಯುತ್ತಾನೆ. ‘ಇಲ್ಲ’ ಎನ್ನಲು ಅವನಿಗೆ ಬರುವುದೇ ಇಲ್ಲ. ಸುಳ್ಳು ಹೇಳುತ್ತಾನೆ, ನಿಲ್ಲಲು-ಕೂರಲು ಮೂಲೆಗಳನ್ನು ಹುಡುಕುತ್ತಾನೆ, ತೊದಲುತ್ತಾನೆ, ಕಣ್ಣು ತಪ್ಪಿಸಿ ಮಾತನಾಡುತ್ತಾನೆ. ಶರೀರ ಮುಂದೆ ಬಾಗಿರುತ್ತದೆ,

ಉಡುಪು ಅಸ್ತವ್ಯಸ್ತವಾಗಿರುತ್ತದೆ. ಶೀಘ್ರಕೋಪಿ ಮತ್ತು ಸೂಕ್ಷ್ಮ ಮನಸ್ಸಿನವನಾದ ಈತ ಜನರ ಎಲ್ಲ ಮಾತುಗಳೂ
ತನ್ನ ಕುರಿತಾದ ವ್ಯಂಗ್ಯ ಅಥವಾ ‘ಟಾಂಟ್’ ಎಂದೇ ಭಾವಿಸುತ್ತಾನೆ, ಅವನ್ನು ವೈಯಕ್ತಿಕ ಮಟ್ಟದಲ್ಲಿಯೇ ಗ್ರಹಿಸು ತ್ತಾನೆ. ಆತ್ಮವಿಶ್ವಾಸವು ಒಂದು ಮಾನಸಿಕ ಸ್ಥಿತಿ. ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವ, ಶರೀರ, ಶಕ್ತಿ-ಸಾಮರ್ಥ್ಯ ಮತ್ತು ತನ್ನತನದ ಕುರಿತು ತಳೆಯುವ ನಂಬಿಕೆ, ಸಂತೃಪ್ತಿಯ ಭಾವನೆಯೇ ಆತ್ಮವಿಶ್ವಾಸ. ಕುತೂಹಲಕಾರಿ ಸಂಗತಿಯೆಂದರೆ, ಆತನ ಶರೀರ ಹೇಗೂ ಇರಬಹುದು (ವೈಕಲ್ಯವೂ ಇರಬಹುದು). ಆದರೆ ಆತ ತನ್ನ ಕುರಿತು ಸಂತೃಪ್ತಿಯ ಭಾವನೆ ಹೊಂದುವಲ್ಲಿ ಯಶಸ್ವಿಯಾದರೆ ಅವನಲ್ಲಿ ಆತ್ಮವಿಶ್ವಾಸ ರಾರಾಜಿಸುತ್ತದೆ.

ಅಲ್ಲಿ ಶಾರೀರಿಕ ಸಮಸ್ಯೆಯ ಪ್ರಶ್ನೆ ಬರುವುದೇ ಇಲ್ಲ. ಎಲ್ಲವೂ ಚೆನ್ನಾಗಿರುವ ವ್ಯಕ್ತಿಗೂ ಕೀಳರಿಮೆ ಕಾಡಬಹುದು. ಹಾಗಾಗಿ ಇಲ್ಲಿ ನಂಬಿಕೆ, ವಿಶ್ವಾಸ, ಸಕಾರಾತ್ಮಕ ದೃಷ್ಟಿಕೋನ, ಆಳವಾದ ಶ್ರದ್ಧೆ, ಎಲ್ಲದರಲ್ಲೂ ಏನೋ ಒಂದು ಒಳ್ಳೆಯದನ್ನೇ ಕಾಣುವ ಮನಸ್ಥಿತಿ, ದೇವರು ಒಳ್ಳೆಯದನ್ನೇ ಮಾಡುತ್ತಾನೆಂಬ ದೃಢನಂಬಿಕೆ ಮುಖ್ಯ. ತನ್ನ ಶಕ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಅನುಮಾನವಿರುವವನು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಆದರೆ, ವಿಶ್ವಾಸ ವಿಡುತ್ತಾ ಹೋದಂತೆ ಅಂಥವನ ಶರೀರದಿಂದ ಸಕಾರಾತ್ಮಕ ಪ್ರಭೆ ಹೊರಹೊಮ್ಮುತ್ತದೆ.

ಆತ್ಮವಿಶ್ವಾಸವು ಒಂದೇ ಹಂತದ ಮಾನಸಿಕತೆಯಲ್ಲ, ಅದರಲ್ಲೂ ಹಲವು ಪದರಗಳಿರುತ್ತವೆ. ಬುದ್ಧ, ಸ್ವಾಮಿ
ವಿವೇಕಾನಂದರಂಥ ಮಹಾತ್ಮರು ಅದರ ಶ್ರೇಷ್ಠತೆಯ ಪದರಗಳಲ್ಲಿ ಬರುವವರು. ಹಾಗಾಗಿಯೇ ಅವರ ಶಿರದ
ಸುತ್ತ ಒಂದು ಬೆಳಕಿನ ವರ್ತುಲವನ್ನು ಬಿಂಬಿಸಲಾಗುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬನ ಸುತ್ತಲೂ ಹೀಗೊಂದು
ಆಕರ್ಷಕ ಪ್ರಭೆ ಸೃಷ್ಟಿಯಾಗಬಲ್ಲದು. ಇದನ್ನೇ ‘ಚರಿಷ್ಮಾ’, ‘ವರ್ಚಸ್ಸು’, ‘ಮೋಹಕತೆ’ ಎಂದೆಲ್ಲಾ ಕರೆಯುವು
ದುಂಟು. ಅಂದರೆ ಒಂಥರಾ ಅಯಸ್ಕಾಂತೀಯ ಶಕ್ತಿ. ಇಂಥವರನ್ನು ನೋಡಲು ಜನ ಮುಗಿ ಬೀಳುತ್ತಾರೆ. ‘ಆತ್ಮ ವಿಶ್ವಾಸಿ’ಗಳೆಲ್ಲರಲ್ಲೂ ಇದು (ವಿಭಿನ್ನ ಪ್ರಮಾಣಗಳಲ್ಲಿ) ಇರುತ್ತದೆ. ರಜನೀಶ್, ಅಟಲ್ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ ಇದಕ್ಕೆ ಒಂದಷ್ಟು ಉದಾಹರಣೆಗಳು. ವ್ಯಕ್ತಿಯೊಬ್ಬ ತನ್ನ ಕೀಳರಿಮೆಯನ್ನು ಬಿಟ್ಟು ಅರಳಿಕೊಂಡು ಅooಛ್ಟಿಠಿಜಿqಛಿ ಆಗಿ ಇರಲು ಕಲಿತಾಗ ಇದು ಸಾಧ್ಯವಾಗುತ್ತದೆ.

ಕೆಲವರಿಗೆ ಇದು ಸಹಜವಾಗಿ ಬಂದರೆ, ಮತ್ತೆ ಕೆಲವರು ಇದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಅಥವಾ ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಇದು ಅರಳುವುದುಂಟು. ಪ್ರಧಾನಿಯಾಗುವಾಗ
ನಾಚಿಕೆಯ ಸ್ವಭಾವದವರಾಗಿದ್ದ, ‘ಗುಂಗಿ ಗುಡಿಯಾ’ ಎಂದು ಕರೆಸಿಕೊಳ್ಳುತ್ತಿದ್ದ ಇಂದಿರಾ ಗಾಂಧಿಯವರು
ತರುವಾಯದಲ್ಲಿ ಅಪಾರ ವರ್ಚಸ್ಸನ್ನು ಬೆಳೆಸಿಕೊಂಡು ಬಿಟ್ಟರು. ಡಾ.ರಾಜ್‌ಕುಮಾರ್, ರಜನಿಕಾಂತ್ ಅವರ
ವ್ಯಕ್ತಿತ್ವಗಳಿಗಿರುವ ಆಕರ್ಷಣೆಯನ್ನು ಗಮನಿಸಿ. ವ್ಯಕ್ತಿಗಳ ಒಳಗಿನ ಆತ್ಮವಿಶ್ವಾಸ ಸಕಾರಾತ್ಮಕ ಕಿರಣವಾಗಿ ಹೊರಹೊಮ್ಮಿದಾಗ ಇಂಥ ವರ್ಚಸ್ಸು ರೂಪುಗೊಳ್ಳುತ್ತದೆ.

ರಾತ್ರಿ ಬೆಳಗಾಗುವ ತನಕ ಇಂಜೆಕ್ಷನ್ ಕೊಟ್ಟು ಜ್ವರವನ್ನು ತಗ್ಗಿಸಿದ ಹಾಗೆ ಆತ್ಮವಿಶ್ವಾಸವನ್ನು ಏಕಾಏಕಿ ವೃದ್ಧಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ಅದು ಹಲವು ಹಂತಗಳಲ್ಲಿ ನಡೆವ ಒಂದು ಸಂಕೀರ್ಣ ಮಾನಸಿಕ ಪ್ರಕ್ರಿಯೆ. ಅದು ಬಾಲ್ಯದಿಂದಲೇ ಆರಂಭವಾಗಬೇಕಿರುವಂಥದ್ದು. ಮನೆಯ ವಾತಾವರಣ, ಸುತ್ತಲ ಪರಿಸರ, ಶಾಲೆಯ ಕಾರ್ಯ ವೈಖರಿ ಸರಿಯಾಗಿದ್ದು ಮಗುವಿನೊಳಗೆ ಸಂತಸ ಮತ್ತು ಆತ್ಮವಿಶ್ವಾಸವನ್ನು ತುಂಬುವಂತಿದ್ದರೆ, ಆ ಮಗುವಿಗೆ ವ್ಯಕ್ತಿತ್ವ ವಿಕಸನದ ಬೇರೆ ಪಾಠ ಕೇಳುವ ಅಗತ್ಯವೇ ಇರುವುದಿಲ್ಲ. ಒಂದೊಮ್ಮೆ ಅಲ್ಲೆಲ್ಲಾ ನಕಾರಾತ್ಮಕತೆ ತೂರಿ ಕೊಂಡುಬಿಟ್ಟರೆ ಮಗುವಿನ ಆತ್ಮ ವಿಶ್ವಾಸವೂ ಕುಗ್ಗಿಬಿಡುತ್ತದೆ.

ಸಮಸ್ಯೆಯೆಂದರೆ, ನಮ್ಮ ಸಮಾಜದಲ್ಲಿ ದೇಹಸೌಂದರ್ಯ ಮತ್ತು ಬುದ್ಧಿವಂತಿಕೆಯ ಕುರಿತು ಒಂದಷ್ಟು ಸಿದ್ಧ ನಂಬಿಕೆಗಳಿವೆ- ‘ಬಿಳಿ’ ಎಂದರೆ ಚಂದ, ‘ಕಪ್ಪು’ ಅಂದರೆ ಕುರೂಪ; ಹೇಳಿಕೊಟ್ಟಂತೆ ಮಾಡುವವ ಬುದ್ಧಿವಂತ, ಏನೇನೋ ಮಾಡಿಬಿಡುವವ ದಡ್ಡ ಹೀಗೆ (‘ಐನ್‌ಸ್ಟೀನ್ ದಡ್ಡ’ ಎಂದು ಸ್ವತಃ ಆತನ ಟೀಚರ್ ಹೇಳಿದ್ದರಂತೆ!).
ಹಾಗೆಯೇ, ಅಕಡೆಮಿಕ್ ಬುದ್ಧಿವಂತಿಕೆ ಮಾತ್ರ ಮಹತ್ವದ್ದು, ‘ನಾಯಕತ್ವ’ ಇತ್ಯಾದಿ ಅನ್ಯಗುಣಗಳು ಅಪ್ರಯೋಜಕ ಎಂಬ ಭಾವನೆ ನಮಗಿದೆ. ಇಂಥ ನಂಬಿಕೆಗಳನ್ನೇ ತಲೆಯಲ್ಲಿಟ್ಟುಕೊಂಡ ಕೆಲವು ಶಾಲೆಗಳು/ ಶಿಕ್ಷಕರು ಮಕ್ಕಳ ಆತ್ಮವಿಶ್ವಾಸವನ್ನು ಹಾಳುಗೆಡವಿ, ಅವರ ಮನಸ್ಸನ್ನು ಬಂಧಿಸಿ ಬಿಡುತ್ತಾರೆ.

ಆತ್ಮವಿಶ್ವಾಸಿಯು ಶಾಂತನಾಗಿರುತ್ತಾನೆ. ಸಿಟ್ಟು, ಪರನಿಂದನೆ, ತನ್ನನ್ನು ಹೊಗಳಿಕೊಳ್ಳುವಿಕೆ, ಬೊಗಳೆ, ಸುಳ್ಳು ಹೇಳುವಿಕೆ ಇತ್ಯಾದಿ ಅವಗುಣಗಳು ಅವನಲ್ಲಿರುವುದಿಲ್ಲ ಅಥವಾ ನಗಣ್ಯ ಪ್ರಮಾಣದಲ್ಲಿರುತ್ತವೆ. ಗೆಲುವನ್ನು ಸಂಭ್ರಮಿಸುವುದರ ಜತೆಗೆ ಸೋಲನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸುವುದೂ ಅವನಿಗೆ ಗೊತ್ತಿರುತ್ತದೆ. ಕರುಣೆ, ಸಹನೆ, ಸ್ಥಿರ ಮನಸ್ಸು ಅವನ ಆಸ್ತಿಗಳಾಗಿರುತ್ತವೆ. ಇಂಥ ವ್ಯಕ್ತಿತ್ವವು ಸಂವಹನ ಕಲೆಯ ಮೂಲವೂ ಹೌದು. ಹಾಗಾದರೆ ಇಂಥ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುವುದು ಹೇಗೆ? ಎಂಬುದಿಲ್ಲಿ ಪ್ರಶ್ನೆ.

ಇಂಥ ವೈಶಿಷ್ಟ್ಯದ ಕೃಷಿ ಆರಂಭವಾಗುವುದೇ ವ್ಯಕ್ತಿಯು ತನ್ನ ಶರೀರವನ್ನು ಪ್ರೀತಿಸಲು ಮತ್ತು ಗೌರವಿಸಲು ಕಲಿಯುವುದರಿಂದ. ಆರೋಗ್ಯದಿಂದ ನಳನಳಿಸುವ ಸದೃಢ ಶರೀರದಲ್ಲಿ ಆತ್ಮವಿಶ್ವಾಸ ನೆಲೆಸುತ್ತದೆ. ದೇಹವನ್ನು ಹಾಗೂ ಧರಿಸುವ ಉಡುಪನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪರಿಪಾಠವು ವ್ಯಕ್ತಿಯ ಮನಸ್ಸನ್ನು ಆಹ್ಲಾದಕರ ವಾಗಿಸುವುದರ ಜತೆಗೆ, ಸಕಾರಾತ್ಮಕ ತರಂಗಗಳನ್ನು ಅವನ ಸುತ್ತ ಹೊಮ್ಮಿಸುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ಆರೋಗ್ಯಕರ ಆಹಾರ, ನೀರು/ ಹಣ್ಣಿನ ರಸವನ್ನು ಯಥೋಚಿತ ಪ್ರಮಾಣದಲ್ಲಿ ಸೇವಿಸುವುದರಿಂದ ಹಾಗೂ ನಿಯತ ವ್ಯಾಯಾಮದಿಂದ ಶರೀರಕ್ಕೆ ಸಹಜಕಾಂತಿ ದಕ್ಕುತ್ತದೆ.

ಹೊಸ ಅನುಭವಗಳಿಗೆ, ಸಾಧ್ಯತೆಗಳಿಗೆ ಒಡ್ಡಿಕೊಳ್ಳುತ್ತಾ ಹೋಗುವುದು ಆತ್ಮವಿಶ್ವಾಸದ ಆರ್ಜನೆಯ ಮತ್ತೊಂದು
ಹಂತ. ಉದಾಹರಣೆಗೆ, ಇದುವರೆಗೂ ತಣ್ಣೀರಿನ ಸ್ನಾನ ಮಾಡಿಯೇ ಇಲ್ಲವೆಂದಾದರೆ ಒಮ್ಮೆ ಮಾಡಿನೋಡಿ,
ಅದರ ಆನಂದವನ್ನು ಅನುಭವಿಸಿ. ವೇದಿಕೆಯೇರಿ ಭಾಷಣ ಮಾಡುವ ಅಭ್ಯಾಸವಿಲ್ಲದಿದ್ದರೆ ಒಮ್ಮೆ ಯತ್ನಿಸಿ
ನೋಡಿ- ಮೊದಲಿಗೆ ಕಾಲು ನಡುಗಬಹುದು, ಆದರೆ ಕ್ರಮೇಣ ಧೈರ್ಯ ಬರುತ್ತದೆ. ಒಟ್ಟಾರೆಯಾಗಿ, ‘ಕಂಫರ್ಟ್ ಝೋನ್’ನಿಂದ ಆಚೆ ಬಂದು ಅನುಭವದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು.

ಹಾಗೆಯೇ, ವ್ಯಕ್ತಿಯು ಆದಷ್ಟು ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಸಹಾಯ-ಸಹಕಾರದಲ್ಲಿ ತೊಡಗಿರಬೇಕು. ಬಹುತೇಕರು ಚಿಕ್ಕ ಚಿಕ್ಕ ಮಾನಸಿಕ ಗೂಡುಗಳನ್ನು ಕಟ್ಟಿಕೊಂಡು ತಂತಮ್ಮ ಜಗತ್ತಿನಲ್ಲಿ ಬದುಕುವುದು ವಾಡಿಕೆ. ಮೇಲ್ನೋಟಕ್ಕೆ ಅದು ಸುಖವೆನಿಸುತ್ತದೆ. ಆದರೆ ನೈಜಸುಖ ಇರುವುದು ಗೂಡುಗಳ ಹೊರಗಿನ ನೀಲಾಕಾಶದಲ್ಲಿ. ಇಂಥ ಮಾನಸಿಕ ಗೂಡಿನಿಂದ ಹೊರಬಂದು ತೆರೆದುಕೊಳ್ಳುತ್ತಾ ಹೋದಂತೆ ಆತ್ವವಿಶ್ವಾಸವೂ ವರ್ಧಿಸತೊಡಗು ತ್ತದೆ. ಹೆಚ್ಚೆಚ್ಚು ತಿರುಗಿದವರು, ಅನುಭವಗಳಿಗೆ ಒಡ್ಡಿಕೊಂಡವರು ಹೆಚ್ಚು ಆತ್ಮವಿಶ್ವಾಸವನ್ನು ದಕ್ಕಿಸಿಕೊಳ್ಳುತ್ತಾರೆ.

ಎಲ್ಲವನ್ನೂ ಸಕಾರಾತ್ಮಕವಾಗಿ ನೋಡುವ, ಆದಷ್ಟು ಸಕಾರಾತ್ಮಕವಾಗಿ ಮಾತಾಡುವ ಪರಿಪಾಠ ಬಹಳ
ಮುಖ್ಯ. ನಮ್ಮ ಸಂಪರ್ಕದಲ್ಲಿರುವ ಜನರ ಕುರಿತು ಆದಷ್ಟು ಒಳ್ಳೆಯ ಮಾತಾಡಬೇಕು, ಕೃತಜ್ಞತೆಗಳನ್ನು
ಸಲ್ಲಿಸಬೇಕು. ಜಗತ್ತಿನ ಬಗ್ಗೆ, ಜನರ ಬಗ್ಗೆ ಕೆಟ್ಟದಾಗಿಯೇ ಯೋಚಿಸುವವರಿಂದ, ಮಾತಾಡುವವರಿಂದ, ಗಾಸಿಪ್
ಗಳಿಂದ ದೂರವಿರಬೇಕು. ‘ಜೀವನಕಲೆ’ ಎಂದರೆ ಗೋಡೆಗೆ ರಬ್ಬರ್ ಚೆಂಡನ್ನು ಎಸೆದಂತೆ; ನಾವೆಷ್ಟು ಬಿರುಸಿನಲ್ಲಿ ಅದನ್ನು ಎಸೆಯುತ್ತೇವೋ, ಅಷ್ಟೇ ಬಿರುಸಿನಲ್ಲಿ ಅದು ನಮ್ಮೆಡೆಗೆ ಮರಳುತ್ತದೆ. ಅಂತೆಯೇ, ನಾವು ಎಂಥ ಮಾತಾಡುತ್ತೇವೆಯೋ ಅಂಥ ಮಾತುಗಳೇ ನಮ್ಮೆಡೆಗೆ ತಿರುಗಿ ಬರುತ್ತವೆ. ಮತ್ತೊಬ್ಬರೆಡೆಗೆ ಮೆಚ್ಚುಗೆಯ ಮಾತಾಡಿದರೆ, ನಿಮ್ಮೆಡೆಗೆ ಮರಳುವುದು ಅಂಥ ಮಾತುಗಳೇ. ಹಾಗಾದಾಗ ಖುಷಿಯಾಗುತ್ತದೆ, ಆತ್ಮವಿಶ್ವಾಸ ಬೆಳೆಯುತ್ತದೆ.

ಹಾಂ! ಇವೆಲ್ಲವನ್ನೂ ಪ್ರಾಮಾಣಿಕವಾಗಿಯೇ ಮಾಡಬೇಕಾಗುತ್ತದೆ, ಇಲ್ಲವಾದಲ್ಲಿ ‘ಈತ ಕಪಟಿ’ ಎಂದು ಜನ ಭಾವಿಸುತ್ತಾರೆ. ನಮ್ಮ ಮನಸ್ಸು ಸಾಗರದಂತೆ. ಅಲ್ಲಿ ಯೋಚನೆಗಳ, ವಿಚಾರಗಳ ಅಲೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ನಕಾರಾತ್ಮಕ ಮತ್ತು ಕೀಳರಿಮೆಯ ವಿಚಾರಗಳು ಮನಸ್ಸನ್ನು ಹೆಚ್ಚು ಮುತ್ತಿಕೊಂಡರೆ, ವ್ಯಕ್ತಿತ್ವದ ಮಟ್ಟವೂ ಕುಸಿಯುತ್ತದೆ. ಬದಲಿಗೆ, ಮನದಲ್ಲಿ ಸಕಾರಾತ್ಮಕ ವಿಚಾರಗಳನ್ನೇ ತುಂಬಿಕೊಂಡರೆ ಆತ್ಮವಿಶ್ವಾಸವು ವರ್ಧಿಸುತ್ತದೆ. ಆದರೆ ಮನದಲ್ಲಿ ಸಕಾರಾತ್ಮಕ ಸಂಗತಿಗಳಷ್ಟೇ ತುಂಬಿಕೊಳ್ಳುವಂತೆ ಮಾಡುವುದು ಹೇಗೆ ಎಂಬುದೇ ಸವಾಲಿನ ಬಾಬತ್ತು. ಹಾಗಂತ ಕೈಚೆಲ್ಲುವಂತಿಲ್ಲ.

ಮನಸ್ಸು ದಾರಿ ತಪ್ಪುತ್ತಲೇ ಇರುತ್ತದೆ, ಆದರೂ ಅದನ್ನು ಸರಿದಾರಿಗೆ ಎಳೆತರಬೇಕು, ನಿಗ್ರಹಿಸಬೇಕು. ಇದಕ್ಕಿರುವ
ಸುಲಭೋಪಾಯವೆಂದರೆ, ನಮ್ಮ ಮನಸ್ಸನ್ನು ಅದಕ್ಕೆ ಇಷ್ಟವಾದ ಕ್ರಿಯೆಯಲ್ಲಿ ತೊಡಗಿಸುವುದು (ಹಾಗಂತ
ಚಟಗಳೆಡೆಗೆ ತಿರುಗಬಾರದು!). ಉದಾಹರಣೆಗೆ, ಸಂಗೀತ, ದೇವರ ನಾಮಸ್ಮರಣೆ, ಚಿತ್ರಕಲೆ, ಷೇರು ಮಾರುಕಟ್ಟೆಯ ಅಧ್ಯಯನ, ಹೊಸ ವಿಷಯಗಳ ಕಲಿಕೆ ಇತ್ಯಾದಿ. ಒಟ್ಟಾರೆ ಹೇಳುವುದಾದರೆ, ಇಂಥ ಯಾವುದೇ ಹವ್ಯಾಸವು ನಮ್ಮ ಮನಸ್ಸನ್ನು ಸಂಪೂರ್ಣ ಆವರಿಸುವಂತಾಗಬೇಕು. ಹೀಗಾದಾಗ ನಕಾರಾತ್ಮಕ ವಿಚಾರಗಳು ನಮ್ಮ ಬಳಿ ಸುಳಿದಾ ಡುವುದಿಲ್ಲ. ಆಗ ಮನಸ್ಸು ಕ್ರಮೇಣ ಸಕಾರಾತ್ಮಕತೆಯತ್ತ ಸಾಗುತ್ತದೆ, ಆತ್ಮವಿಶ್ವಾಸ ವರ್ಧಿಸುತ್ತದೆ.

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ ಸಮಾಲೋಚಕರು)

ಇದನ್ನೂ ಓದಿ: Prof R G Hegde Column: ವ್ಯಕ್ತಿತ್ವ ವಿಕಸನದ ವಿಭಿನ್ನ ಆಯಾಮಗಳು