Thursday, 12th December 2024

Dr M C Sudhakar: ಯಾರ ಮನಸ್ಥಿತಿ ಏನು ಎಂದು ಕೋವಿಡ್ ಸಂದರ್ಭದಲ್ಲಿ ಜನ ನೋಡಿದ್ದಾರೆ : ಡಾ.ಎಂ.ಸಿ.ಸುಧಾಕರ್ ವ್ಯಂಗ್ಯ

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಎಂದಿಗೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ಸಂಸದ ಡಾ.ಕೆ. ಸುಧಾಕರ್ ಹೇಳಿಕೆಗೆ ತಿರುಗೇಟು

ಚಿಕ್ಕಬಳ್ಳಾಪುರ : ಯಾರ ಮನಸ್ಥಿತಿ ಏನು ಎಂಬುದನ್ನು ಕೋವಿಡ್ ಸಂದರ್ಭದಲ್ಲಿಯೇ ರಾಜ್ಯದ ಜನ ನೋಡಿದ್ದಾರೆ. ಇರಲಿ ಬಿಡಿ ಪಾಪ ಅದು ಅವರ ಮನಸ್ಥಿತಿ ಅವರು ಮಾತಾಡಿದ್ದಾರೆ ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ಸಂಸದ ಡಾ.ಕೆ.ಸುಧಾಕರ್ ನೀಡಿದ್ದ ವೇದಿಕೆ ಹಂಚಿ ಕೊಳ್ಳುವುದಿಲ್ಲ ಎಂಬ ಹೇಳಿಕೆಗೆ ಟಾಂಗ್ ನೀಡಿದರು.

ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿ ಮತ್ತು ಶಿಷ್ಟಾಚಾರದ ಪ್ರಕಾರ ಸರಕಾರಿ ಕಾರ್ಯಕ್ರಮಗಳನ್ನು ರೂಪಿಸಿ ವೇದಿಕೆಗೆ ಗಣ್ಯರನ್ನು ಆಹ್ವಾನ ಮಾಡುತ್ತಾರೆ. ಅಂತಹವರಿಗೆ ಮಾತ್ರ ಆಸನ ನಿಗದಿ ಪಡಿಸಿರುತ್ತಾರೆ. ಬರೋದು ಬಿಡೋದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ಚರ್ಚೆ ಮಾಡುವುದು ಬೇಡ.ಯಾರು ಒಳ್ಳೆಯವರು, ಯಾರು ಕೆಟ್ಟವರು? ಯಾರ ಮನಸ್ಥಿತಿ ಏನು ಎಂಬುದು ಕೋವಿಡ್ ಸಂದರ್ಭದಲ್ಲಿ ನಡೆದಿರುವಂತಹ ೭೫೦೦ ಕೋಟಿಯ ಅವ್ಯವಹಾರವೇ ಹೇಳುತ್ತಿದೆ. ಈ ವಿಚಾರದಲ್ಲಿ ಈಗಾಗಲೇ ವರದಿ ಬಂದಿದೆ. ಇದೇ ಸಾಕು ಯಾರು ಕೆಟ್ಟವರು ಯಾರು ಒಳ್ಳೆಯವರು ಎಂಬುದನ್ನು ಹೇಳುತ್ತೆ ಎಂದರು.

ಐಸಿಯು ಚಿಂತಾಮಣಿಗೆ ಶಿಫ್ಟ್ಗೆ ಸ್ಪಷ್ಟನೆ

ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವೇ ಆಗಿದ್ದು ಹೊರಗೆಲ್ಲೂ ಇಲ್ಲ.ಕೇಂದ್ರ ಸರಕಾರದ ಮಾರ್ಗಸೂಚಿ ಗಳನ್ವಯವೇ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸ್ಥಾಪನೆಗೆ ಅವಕಾಶ ಇಲ್ಲದ ಕಾರಣ ಚಿಂತಾಮಣಿಗೆ ತೆಗೆದುಕೊಂಡು ಹೋಗಲಾಗಿದೆ.ಡಾ.ಕೆ.ಸುಧಾಕರ್ ಅವರಿಗೆ ಅಧ್ಯಯನದ ಕೊರತೆಯಿದೆ.ಸರಿಯಾಗಿ ಓದಿಕೊಂಡು ಮಾತನಾಡಬೇಕು ಎಂದು ತಾಕೀತು ಮಾಡಿದರು.

ರೋಪ್‌ವೇಯಿಂದಾಗಿ ನಂದಿಬೆಟ್ಟದಲ್ಲಿ ಯಾವ ರೀತಿ ಭೂಕುಸಿತ ಆಗುತ್ತದೆ ಎಂಬ ಬಗ್ಗೆ ಪರಿಸರವಾದಿಗಳಲ್ಲಿ ಏನಾದರೂ ಅಧ್ಯಯನ ವರದಿ ಇದ್ದರೆ ಕೊಡಲಿ. ಅದನ್ನು ಪರಿಶೀಲಿಸಿ ಅವರ ಆತಂಕ ನಿಜವೇ ಆಗಿದ್ದರೆ ನಿಲ್ಲಿಸೋಣ ಎಂದು ಹೇಳಿದರು.

ಒಳಮೀಸಲಾತಿ ಗಂಭಿರ ವಿಚಾರವಾಗಿದೆ.ಈ ವರದಿ ಇನ್ನೂ ನಮ್ಮ ಕೈಗೆ ಸೇರಿಲ್ಲ,ಬಂದ ನಂತರ ಈ ಬಗ್ಗೆ ಮುಖ್ಯ ಮಂತ್ರಿಗಳೇ ಸೂಕ್ತ ತೀರ್ಮಾನ ತೆಗೆದುಕೊಳ್ಳುವರು .ಉಪಚುನಾವಣೆಯಲ್ಲಿ ಮೂರಕ್ಕೆ ಮೂರರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯಕಾಣುವರು. ಇದಕ್ಕೆ ಸಂಶಯಬೇಡ ಎಂದರು.

ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಪೌರಾಯುಕ್ತರೇ ಇಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಗ್ರೇಡ್೧ ಪೌರಾಯುಕ್ತರು ಅಲಭ್ಯರಿರುವ ಕಾರಣ ಈ ಸ್ಥಾನ ತುಂಬಲಾಗಿಲ್ಲ.ಈ ಅರ್ಹತೆಯವರು ಇಲ್ಲವೆಂದೇ ಕೋರ್ಟಿಗೆ ಹೋಗಿದ್ದಾರೆ.ಯಾರು ಹೋಗಿದ್ದಾರೆ, ಯಾಕೆ ಹೋಗಿದ್ದಾರೋ ಗೊತ್ತಿಲ್ಲ.ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಾಣಿಸೋಣ ಎಂದರು.