Saturday, 23rd November 2024

Terror Attack: ಜಮ್ಮು & ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ನಾಗರಿಕ ಬಲಿ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಉಗ್ರರ ಹಾವಳಿ ಮಿತಿ ಮೀರಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಝೈನಾಪೊರಾದ ವದುನಾ ಪ್ರದೇಶದಲ್ಲಿ ಉಗ್ರರ ದಾಳಿಗೆ ನಾಗರಿಕರೊಬ್ಬರು ಬಲಿಯಾಗಿದ್ದಾರೆ. ಸ್ಥಳೀಯರಲ್ಲದ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ದೇಹದಲ್ಲಿ ಅನೇಕ ಗುಂಡಿನ ಗಾಯ ಕಂಡು ಬಂದಿದೆ ಎಂದು ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್‌ 18) ತಿಳಿಸಿದ್ದಾರೆ (Terror Attack).

ಸ್ಥಳೀಯರಲ್ಲದ ವ್ಯಕ್ತಿಯ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ ಮತ್ತು ಮೃತನ ಗುರುತು ಪತ್ತೆಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಎಸ್ಒಜಿ (Special Operations Group) ರಾಜೌರಿಯ ಶಹದ್ರಾ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಯೋಧರೊಬ್ಬರ ಮೃತದೇಹ ಪತ್ತೆಯಾಗಿತ್ತು

ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ನಂತರ ಭಾರತೀಯ ಸೈನಿಕರೊಬ್ಬರ ಮೃತದೇಹ ಪತ್ತೆಯಾಗಿತ್ತು. ಉಗ್ರರು ಅಕ್ಟೋಬರ್‌ 8ರಂದು ಇಬ್ಬರು ಯೋಧರನ್ನು ಅಪಹರಿಸಿದ್ದರು. ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದರು. ಸೈನಿಕ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡವು ಅಪಹರಣಕ್ಕೊಳಗಾದ ಮತ್ತೋರ್ವ ಸೈನಿಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ವೇಳೆ ಮೃತದೇಹ ಪತ್ತೆಯಾಗಿತ್ತು.

ʼʼಟೆರಿಟೋರಿಯಲ್ ಆರ್ಮಿ (Territorial Army) ಸೈನಿಕ ಜವಾನ್ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಭದ್ರತಾ ಪಡೆ ಅಕ್ಟೋಬರ್‌ 9ರಂದು ವಶಪಡಿಸಿಕೊಂಡಿವೆ. ಶಾ ಪ್ರದೇಶದಿಂದ ಹಿಲಾಲ್ ಅಹ್ಮದ್ ಭಟ್ ಅವರನ್ನು ಅಪಹರಿಸಲಾಗಿತ್ತು. ಮೃತದೇಹ ಅನಂತ್‌ನಾಗ್‌ನ ಉತ್ರಾಸೂದ ಸಾಂಗ್ಲಾನ್ ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆʼʼ ಎಂದು ಮೂಲಗಳು ತಿಳಿಸಿದ್ದವು. ಮೃತದೇಹದ ತುಂಬ ಗುಂಡಿನ ಗಾಯ ಕಂಡುಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಉಗ್ರರು ಅಂತಹದ್ದೇ ಮತ್ತೊಂದು ದಾಳಿ ನಡೆಸಿದ್ದಾರೆ.

ಈ ವರ್ಷದ ಆಗಸ್ಟ್ 27ರಂದು ಭದ್ರತಾ ಪಡೆಗಳು ಅನಂತ್‌ನಾಗ್‌ ಜಿಲ್ಲೆಯಲ್ಲಿ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದವು. ಪೊಲೀಸರು, ಸಿಆರ್‌ಪಿಎಫ್‌ ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅನಂತ್‌ನಾಗ್‌ ಜಿಲ್ಲೆಯ ವೊಪ್ಜಾನ್ ಟ್ರೈ-ಜಂಕ್ಷನ್‌ನಲ್ಲಿ ಬಯೋತ್ಪಾದಕರು ಬಲೆಗೆ ಬಿದ್ದಿದ್ದರು. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು. ಇದು 1 ಪಿಸ್ತೂಲ್, 2 ಗ್ರೆನೇಡ್‌ ಒಳಗೊಂಡಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ರಜೆಯಲ್ಲಿದ್ದ ಯೋಧರೊಬ್ಬರನ್ನು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಅಪಹರಿಸಲಾಗಿತ್ತು. ಬಳಿಕ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದರು. 20ರ ವರ್ಷದ ಯೋಧ ವಾನಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ತಮ್ಮ ಮನೆಯ ಬಳಿ ನಾಪತ್ತೆಯಾಗಿದ್ದರು. ಅವರ ಕಾರು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕ ಮೂಡಿತ್ತು. ಕೆಲವು ದಿನಗಳ ಬಳಿಕ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಈ ಸುದ್ದಿಯನ್ನೂ ಓದಿ: NIA Raid : ಬೆಂಗಳೂರಿನಲ್ಲಿ ಎನ್‌ಐಎ ದಾಳಿ; ಶಂಕಿತ ಭಯೋತ್ಪಾದಕನ ಸೆರೆ