Friday, 22nd November 2024

IPL 2025: ಆರ್‌ಸಿಬಿ ರಿಟೈನ್‌ ಪಟ್ಟಿ ಅಂತಿಮ; ಕೊಹ್ಲಿ ಮೊದಲ ಆಯ್ಕೆ

ಬೆಂಗಳೂರು: 2025ರ ಐಪಿಎಲ್‌ಗೆ(IPL 2025) ಆರ್‌ಸಿಬಿ(RCB) ರಿಟೈನ್‌ ಮಾಡಿಕೊಳ್ಳಬಹುದಾದ ಆಟಗಾರರ ಪಟ್ಟಿಯೊಂದು(RCB retention list) ಹೊರಬಿದ್ದಿದೆ. ಮೊದಲ ಆಯ್ಕೆಯಾಗಿ ವಿರಾಟ್‌ ಕೊಹ್ಲಿ(Virat Kohli) ಕಾಣಿಸಿಕೊಂಡಿದ್ದು 18 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ ಎಂದು ವರದಿಯಾಗಿದೆ.

ಇದೇ ವೇಳೆ ಕಳೆದ ಬಾರಿ ಕಳಪೆ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು14 ಕೋಟಿ ನೀಡಿ ಉಳಿಸಿಕೊಂಡಿರುವುದಾಗಿ ಗೊತ್ತಾಗಿದೆ. ಉಳಿದಂತೆ ವೇಗಿ ಮೊಹಮ್ಮದ್‌ ಸಿರಾಜ್‌(14 ಕೋಟಿ), ಆಕಾಶ್‌ ದೀಪ್‌(11 ಕೋಟಿ), ಅನ್‌ಕ್ಯಾಪ್ಡ್‌ ಆಟಗಾರನಾಗಿ ವೈಶಾಕ್‌ ವಿಜಯ್‌ಕುಮಾರ್‌(4) ಮತ್ತು ನಾಯಕ ಫಾಫ್‌ ಡುಪ್ಲೆಸಿಸ್‌ ಅವರನ್ನು ಆರ್‌ಟಿಎಂ ಮೂಲಕ ತಂಡ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಮತ್ತೆ ತವರು ತಂಡವಾದ ಆರ್​ಸಿಬಿ(RCB)ಗೆ ಸೇರಲಿದ್ದಾರೆ ಎನ್ನಲಾಗಿದೆ. ಆಯುಧ ಪೂಜೆ ವೇಳೆ ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ವಿರಾಟ್‌ ಕೊಹ್ಲಿ ಮತ್ತು ರಾಹುಲ್‌ ಬ್ಯಾಟ್‌ ಇರುವ ಫೋಟೊವನ್ನು ಶೇರ್‌ ಮಾಡಿತ್ತು. ಹೀಗಾಗಿ ರಾಹುಲ್‌ ಆರ್‌ಸಿಬಿ ಸೇರುವುದು ಖಚಿತ ಎನ್ನುವಂತಿದೆ.

ಇದನ್ನೂ ಓದಿ IPL 2025: ಮುಂಬೈನಲ್ಲಿ ರೋಹಿತ್‌ ರಿಟೈನ್‌

ಇನ್ನೊಂದೆಡೆ ಲಕ್ನೋ ಫ್ರಾಂಚೈಸಿಗೆ ಹತ್ತಿರವಿರುವ ಮೂಲಗಳು ರಾಹುಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಹೇಳುತ್ತಿವೆ. ಇತ್ತೀಚೆಗೆ ರಾಹುಲ್ ಅವರು ಗೋಯೆಂಕಾ ಅವರನ್ನು ಕೋಲ್ಕತ್ತಾದ ಅಲಿಪುರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ಇಬ್ಬರೂ ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ಒಟ್ಟಾರೆ ಟೀಮ್​ ಇಂಡಿಯಾ ಪರ ಕೂಡ ಫಾರ್ಮ್​ ಕಳೆದುಕೊಂಡಿರುವ ರಾಹುಲ್​ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು 120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ 79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.