ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 300 ರು. ಲಂಚ (Bribe) ಪಡೆದ ಆರೋಪದಲ್ಲಿ ಮಹಿಳಾ ಟೈಪಿಸ್ಟ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ (Dismissal) ರಾಜ್ಯ ಸರಕಾರದ (Karnataka government) ಕ್ರಮವನ್ನು ಹೈಕೋರ್ಟ್ (Karnataka high court) ಎತ್ತಿಹಿಡಿದಿದೆ.
ಲಂಚ ಪ್ರಕರಣದ ಬಳಿಕ ಸೇವೆಯಿ೦ದ ವಜಾಗೊಂಡ ಮಹಿಳೆಗೆ ಕಡ್ಡಾಯ ನಿವೃತ್ತಿ ನೀಡಿದ್ದ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಸಿ.ಎಂ.ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು.
ಪ್ರಕರಣದಲ್ಲಿ ಆರೋಪಿ ಮಹಿಳೆ ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಪಡೆಯುವುದು ಗಂಭೀರ ಸಾಮಾಜಿಕ ನೈತಿಕತೆಯ ವಿಷಯವಾಗಿದ್ದು, ಇದರ ಪರಿಣಾಮವನ್ನು ಆರೋಪಿ ಎದುರಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಆದರೆ, ಇಲಾಖಾ ವಿಚಾರಣೆಯಲ್ಲಿ ಲಂಚ ಪಡೆದುಕೊಂಡಿರುವ ಅಂಶ ಗೊತ್ತಾಗಿದ್ದರೂ, ಅದನ್ನು ಪರಿಗಣಿಸದೆ ಶಿಕ್ಷೆಯನ್ನು ಮಾರ್ಪಾಡು ಮಾಡಿದೆ. ಅಲ್ಲದೆ, ಶಿಸ್ತು ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರವು ವಿಧಿಸುವ ಶಿಕ್ಷೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ ಎಂಬ ಅಂಶ ಗೊತ್ತಿದ್ದಲ್ಲಿ ಮಾತ್ರ ಶಿಕ್ಷೆಯ ಪ್ರಮಾಣ ಬದಲಾವಣೆ ಮಾಡಬಹುದು ಎಂದು ಸುಪ್ರೀಂ ಕೊರ್ಟ್ ಪ್ರಕರಣವೊಂದರಲ್ಲಿ ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಲಂಚ ಸ್ವೀಕರಿಸಿದವರನ್ನು ವಜಾ ಮಾಡಿರುವ ಶಿಕ್ಷೆ ನ್ಯಾಯಾಲಯದ ಆತ್ಮ ಸಾಕ್ಷಿಯನ್ನು ಆಘಾತಗೊಳಿಸುವಂತಿದೆ ಅಥವಾ ಅಸಮಂಜಸವಾಗಿದೆ ಎಂಬುದಕ್ಕೆ ನ್ಯಾಯಮಂಡಳಿ ಸೂಕ್ತ ಕಾರಣ ನೀಡಿಲ್ಲ. ಆದರೂ, ವಜಾಗೊಳಿಸಿರುವ ಅಪರಾಧಿಯ ಆದೇಶವನ್ನು ಮಾರ್ಪಡಿಸಿ ಕಡ್ಡಾಯ ನಿವೃತ್ತಿ ಮಾಡಲು ಆದೇಶಿಸಿದೆ. ಈ ರೀತಿಯಲ್ಲಿ ಆದೇಶ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ ಸರ್ಕಾರದ ಆದೇಶ ಸರಿಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Kerala High Court : ಅಪ್ರಾಪ್ತ ವಯಸ್ಸಿನವರ ಎದುರು ಲೈಂಗಿಕ ಕ್ರಿಯೆ ನಡೆಸುವುದು ಲೈಂಗಿಕ ಕಿರುಕುಳ ಎಂದ ಹೈಕೋರ್ಟ್