Friday, 22nd November 2024

Karnataka By Election: ಬಿಜೆಪಿಯಲ್ಲಿ ಬಂಡಾಯ ಭಯ; ಉಪಚುನಾವಣೆ ಟಿಕೆಟ್‌ ಫೈನಲ್‌ ದೆಹಲಿಗೆ

bjp candidates

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka By Election) ಬಿಜೆಪಿಯ (BJP) ಅಭ್ಯರ್ಥಿಗಳ ಆಯ್ಕೆ ಇನ್ನೂ ಫೈನಲ್‌ ಆಗಿಲ್ಲ. ಚನ್ನಪಟ್ಟಣ (Channapatna By Election) ಸೇರಿದಂತೆ ಮೂರೂ ಕ್ಷೇತ್ರಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಆತಂಕವಿದ್ದು, ಇದನ್ನು ತಡೆಯಲು ಪಕ್ಷದ ರಾಜ್ಯಾಧ್ಯಕ್ಷರು ಹೈಕಮಾಂಡ್‌ ಮೊರೆ ಹೋಗಿದ್ದಾರೆ. ಟಿಕೆಟ್‌ ಸಂಬಂಧ ವರಿಷ್ಠರ ಜೊತೆಗೆ ಚರ್ಚಿಸಲು ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಭಾನುವಾರ ನವದೆಹಲಿಗೆ ತೆರಳುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತಿತರ ಪ್ರಮುಖರ ಜೊತೆ ವಿಜಯೇಂದ್ರ ಚರ್ಚಿಸಿ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ನಂತರ ವರಿಷ್ಠರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮವಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಯಾರಿಗೆ ನೀಡಿದರೂ ಇತರರ ಮುನಿಸು ಖಚಿತ. ಇದನ್ನು ತಪ್ಪಿಸಲು ಅಂತಿಮವಾಗಿ ಪಕ್ಷದ ರಾಷ್ಟ್ರೀಯ ನಾಯಕರೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿ ಎಂಬುದು ರಾಜ್ಯ ನಾಯಕರ ಇಂಗಿತ. ಟಿಕೆಟ್ ಕೈ ತಪ್ಪಿದವರು ಮುನಿಸಿಕೊಂಡು ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಬಹುದೆಂಬ ಎಚ್ಚರಿಕೆ ಹಿನ್ನಲೆಯಲ್ಲಿ, ಟಿಕೆಟನ್ನು ದೆಹಲಿ ನಾಯಕರೇ ತೀರ್ಮಾನಿಸಲಿ ಎಂಬ ನಿರ್ಧಾರಕ್ಕೆ ರಾಜ್ಯ ನಾಯಕರು ಬಂದಿದ್ದಾರೆ.

ಚನ್ನಪಟ್ಟಣ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ. ಇಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಲಹೆ ಮಾಡಲಿದ್ದಾರೆ. ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು,ಇಲ್ಲಿ ಜೆಡಿಎಸ್‌ಗೆ ಟಿಕೆಟ್‌ ನೀಡಿದರೆ ಅವರು ಬಂಡಾಯ ಏಳುವುದು ಖಚಿತವಾಗಿದೆ. ಅತ್ತ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರೂ ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವುದು ಇಲ್ಲವೇ ಬಿಡುವುದು, ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನು ದೆಹಲಿ ನಾಯಕರಿಗೆ ಬಿಡಲಾಗಿದೆ.

ರಾಜ್ಯ ನಾಯಕರ ಮಾತನ್ನು ಯೋಗೇಶ್ವರ್ ಅವರು ಕೇಳುವವರಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ಟಿಕೆಟ್‌ ಸಿಗದಿದ್ದರೆ ಅವರನ್ನು ಸಮಾಧಾನಪಡಿಸಿ ಬೇರೆ ಸ್ಥಾನದ ಭರವಸೆ ನೀಡುವುದು ವರಿಷ್ಠರ ಹೊಣೆ. ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾದರೆ ಅದು ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ ಎಂದು ವರಿಷ್ಠರಿಗೆ ವಿಜಯೇಂದ್ರ ಮನವರಿಕೆ ಮಾಡಿಕೊಡಬಹುದು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ಪುತ್ರ ಭರತ್ ಬೊಮ್ಮಾಯಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ನಿಮ್ಮ ಮಗನಿಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚಿಸಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬೊಮ್ಮಾಯಿಗೆ ಸೂಚಿಸಿರುವುದರಿಂದ ಇದು ಖಚಿತ ಎನ್ನಲಾಗಿದೆ. ಇದೇ ಕ್ಷೇತ್ರದಿಂದ ಮಾಜಿ ಸಚಿವ ಮುರುಗೇಶ್ ನಿರಾಣಿ ತಮಗೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರಕ್ಕೆ ಹಲವು ಹೆಸರುಗಳು ಕೇಳಿಬಂದಿವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶಿಲ್ಪ, ಮಾಜಿ ಸಂಸದ ಎನ್.ವೈ ದೇವೇಂದ್ರಪ್ಪ, ಕೆ.ಎಸ್‌ ದಿವಾಕರ್ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಯಲ್ಲಿವೆ.

ನಾಮಪತ್ರ ಸಲ್ಲಿಸಲು ಇದೇ ತಿಂಗಳು 25 ಕಡೆಯ ದಿನವಾಗಿರುವುದರಿಂದ ಮುಂದಿನ ವಾರ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Channapatna By Election: ಚನ್ನಪಟ್ಟಣಕ್ಕೆ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸಲಿದೆ: ಡಿ.ಕೆ. ಸುರೇಶ್