ಹೈದರಾಬಾದ್: ಬೇರೆಯವರಿಗೆ ಬುದ್ಧಿ ಹೇಳುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ ಎಂಬುದಕ್ಕೆ ಹೈದರಾಬಾದ್‍ನ ಅಲ್ವಾಲ್ ಪ್ರದೇಶದಲ್ಲಿ ನಡೆದ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ನಿಧಾನವಾಗಿ ಬೈಕ್ ಓಡಿಸಪ್ಪ ಎಂದಿದ್ದಕ್ಕೆ ಬೈಕ್ ಸವಾರನೊಬ್ಬ ಕ್ರೂರವಾಗಿ ವೃದ್ಧ ಪಾದಚಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಘಟನೆಯಲ್ಲಿ ವೃದ್ಧನ ತಲೆಗೆ ತೀವ್ರ ಪೆಟ್ಟಾಗಿ ಅವರು ಮೃತಪಟ್ಟಿದ್ದಾರೆ.
65 ವರ್ಷದ ಆಂಜನೇಯಲು ಹತ್ಯೆಗೀಡಾದ ವೃದ್ಧ. ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ಸವಾರನ ಬಳಿ ನಿಧಾನವಾಗಿ ಹೋಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಾವಳಿಗಳಲ್ಲಿ ಆಂಜನೇಯಲು ಬುದ್ಧಿಮಾತು ಹೇಳಿದ್ದಕ್ಕೆ ಕೋಪಗೊಂಡ ಬೈಕ್ ಸವಾರ ಬೈಕ್ ರಸ್ತೆ ಬದಿಯಲ್ಲಿ ನಿಲ್ಲಿಸಿ ವೃದ್ಧನ ಮೇಲೆ ಆಕ್ರಮಣ ಮಾಡಿದ್ದಾನೆ. ಆ ಬೈಕಿನಲ್ಲಿ ಆತನ ಜೊತೆ ಮಹಿಳೆ ಹಾಗೂ ಮಗು ಇದ್ದರು ಎನ್ನಲಾಗಿದೆ. ಆಂಜನೇಯಲು ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಆತ ಮುಂದಾದಾಗ ಮಹಿಳೆ ಆತನನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಆತ ಹಲ್ಲೆ ನಡೆಸಿದ್ದಾನೆ.
#Hyderabad: An elderly man was brutally attacked in Alwal by a motorbike rider following a confrontation. The incident occurred when the elderly man asked the rider, who was speeding, to slow down pic.twitter.com/jD9GdsggiX
— Hyderabadinlast24hrs (@hyderabadinlast) October 18, 2024
ಈ ಘಟನೆಯಲ್ಲಿ ಆಂಜನೇಯಲು ಅವರಿಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರ ಕುಟುಂಬವು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾಳಿಯ ಸಮಯದಲ್ಲಿ ಅವರ ತಲೆಗೆ ತೀವ್ರವಾದ ಗಾಯವಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ತಾಳಿಕಟ್ಟಲು ಬಂದಾಗ ವಧು ಮಾಡಿದ್ದೇನು? ವಿಡಿಯೊ ವೈರಲ್
ಘಟನೆಯ ನಂತರ, ಆಂಜನೇಯಲು ಕುಟುಂಬದವರು ಅಲ್ವಾಲ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.