ಅನೇಕ ರೀತಿಯ ಕಾಯಿಲೆಗಳಿಗೆ ಅಹ್ವಾನ ನೀಡುತ್ತದೆ ಎಂಬುದು ಗೊತ್ತಿದ್ದರೂ ಅನೇಕರು ತಮ್ಮ ದಿನಚರಿಯಲ್ಲಿ ತಂಪು ಪಾನೀಯ (soft drink) ಸೇವನೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೆಚ್ಚಾಗಿ ತಂಪು ಪಾನೀಯ ಸೇವನೆ ದೇಹಕ್ಕೆ ಹಾನಿಕಾರಕ ಮಾತ್ರವಲ್ಲ ಮೂಳೆಯ ಆಯುಷ್ಯ (Bone Health) ಕಡಿಮೆ ಮಾಡುತ್ತದೆ.
ತಂಪು ಪಾನೀಯ ಸೇವನೆ ದೇಹದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎಂಬುದು ಗೊತ್ತಿದ್ದರೂ ಅನೇಕರು ಈ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಕೆಲವರಿಗೆ ಇದಿಲ್ಲದೆ ನಿತ್ಯದ ಭೋಜನ ಅಪೂರ್ಣವೆನ್ನುವಂತೆ ಭಾಸವಾಗುತ್ತದೆ.
ತಂಪು ಪಾನೀಯಗಳ ಅತಿಯಾದ ಸೇವನೆಯಿಂದ ಮೂಳೆ ಮುರಿಯುವ ಅಪಾಯವಿದೆ ಎಂದು ಈ ನಿಟ್ಟಿನಲ್ಲಿ ಏಳು ವರ್ಷಗಳ ಅಧ್ಯಯನ ನಡೆಸಿರುವ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ವರದಿ ತಿಳಿಸಿದೆ.
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಡೆಸಿರುವ ಮತ್ತೊಂದು ಅಧ್ಯಯನವು ಕೋಲಾ ಸೇವನೆಯು ಮೂಳೆ ಖನಿಜ ಸಾಂದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ತಂಪು ಪಾನೀಯಗಳಲ್ಲಿ ಇರುವ ಸಕ್ಕರೆಯ ಅಂಶವು ದೇಹದ ತೂಕ ಹೆಚ್ಚಿಸುತ್ತದೆ, ಹೃದ್ರೋಗ, ಮಧುಮೇಹ ಮತ್ತು ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ ಇದು ಮೂಳೆ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂಬುದನ್ನು ಯಾರೂ ಗಮನಿಸಿಲ್ಲ. ಇದು ಹೆಚ್ಚಿನ ಗಮನ ನೀಡಬೇಕಾದ ಅತ್ಯಂತ ಗಂಭೀರ ಅಪಾಯಗಳಲ್ಲಿ ಒಂದಾಗಿದೆ.
ತಂಪು ಪಾನೀಯಗಳಲ್ಲಿ ಏನಿರುತ್ತೆ?
ತಂಪು ಪಾನೀಯಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಎರಡು ಪ್ರಮುಖ ಅಂಶಗಳಿವೆ. ಒಂದು ಕೆಫೀನ್ ಮತ್ತೊಂದು ಫಾಸ್ಪರಿಕ್ ಆಮ್ಲ. ಇದನ್ನು ಮರೆಮಾಚಲು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸಲಾಗುತ್ತದೆ.
ಕೆಫೀನ್ ಮೂಳೆಗಳ ಕ್ಯಾಲ್ಸಿಯಂ ಹೀರುವಿಕೆಗೆ ಅಡ್ಡಿ ಪಡಿಸುತ್ತದೆ. ಫಾಸ್ಪರಿಕ್ ಆಮ್ಲ ಮೂಳೆಗಳ ಕ್ಯಾಲ್ಸಿಯಂ ಅನ್ನು ನಷ್ಟ ಮಾಡುತ್ತದೆ. ಕ್ಯಾಲ್ಸಿಯಂ ಮೂಳೆಗಳ ಶಕ್ತಿಗೆ ಅತ್ಯವಶ್ಯಕವಾಗಿದೆ.
ವೈದ್ಯರು ಹೇಳುವುದು ಏನು?
ಈ ಕುರಿತು ದೆಹಲಿಯ ಆರ್ಟೆಮಿಸ್ ಹಾಸ್ಪಿಟಲ್ಸ್‌ನ ಮೂಳೆ ತಜ್ಞರಾದ ಡಾ. ರಾಮ್‌ಕಿಂಕರ್ ಝಾ ಹೇಳುವುದು ಹೀಗೆ..
ತಂಪು ಪಾನೀಯಗಳಲ್ಲಿ ಕಂಡುಬರುವ ಕೆಫೀನ್ ಮತ್ತು ಫಾಸ್ಪರಿಕ್ ಆಮ್ಲವು ಮೂಳೆ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಕೆಫೀನ್ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆದು ಮೂಳೆಯ ಖನಿಜ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಫಾಸ್ಪರಿಕ್ ಆಮ್ಲವು ದೇಹದಲ್ಲಿರುವ ಕ್ಯಾಲ್ಸಿಯಂ ಅನ್ನು ಮೂತ್ರದ ಮೂಲಕ ಹೊರಹಾಕುವಂತೆ ಮಾಡುತ್ತದೆ. ಇದು ಕ್ಯಾಲ್ಸಿಯಂ ಕೊರತೆಯನ್ನು ಉಂಟು ಮಾಡುತ್ತದೆ. ಈ ಅಂಶಗಳು ಕಾಲಾನಂತರದಲ್ಲಿ ದುರ್ಬಲ ಮೂಳೆಗಳಿಗೆ ಕಾರಣವಾಗುತ್ತದೆ.
ಕ್ಯಾಲ್ಸಿಯಂನ ಚಯಾಪಚಯ ಕ್ರಿಯೆಗೆ ನಿರ್ಣಾಯಕವಾಗಿರುವ ಪ್ರೊಟೀನ್ ಇನೋಸಿಟಾಲ್‌ನ ರಕ್ತದ ಮಟ್ಟವನ್ನು ಕೆಫೀನ್ ಕಡಿಮೆ ಮಾಡುತ್ತದೆ. ಇದು ಇನೋಸಿಟಾಲ್‌ನೊಂದಿಗೆ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ದೇಹವು ಕರುಳಿನ ಮೂಲಕ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ. ತಂಪು ಪಾನೀಯಗಳಲ್ಲಿರುವ ಫಾಸ್ಪರಿಕ್ ಆಮ್ಲವು ಗ್ಯಾಸ್ಟ್ರಿಕ್ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಪಿಡಿ ಹಿಂದೂಜಾ ಆಸ್ಪತ್ರೆ ಮತ್ತು ಎಂಆರ್‌ಸಿ ಮಾಹಿಮ್ ನ ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಶಿವಾಂಗಿ ಬೋರ್ಕರ್.
ಇನ್ನು ತಂಪು ಪಾನೀಯಗಳಲ್ಲಿರುವ ಹೆಚ್ಚಿನ ಸಕ್ಕರೆಯು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಮೂತ್ರಪಿಂಡಗಳ ಮೂಲಕ ಕ್ಯಾಲ್ಸಿಯಂ ವಿಸರ್ಜನೆಯನ್ನು ಉತ್ತೇಜಿಸುತ್ತದೆ ಎನ್ನುತ್ತಾರೆ ಡಾ. ರಾಮ್‌ಕಿಂಕರ್ ಝಾ.
ತಂಪು ಪಾನೀಯಗಳ ವ್ಯಸನಿಯಾಗಿದ್ದರೆ ಅಂತವರು ಹಾಲು, ಮಜ್ಜಿಗೆ ಅಥವಾ ಜ್ಯೂಸ್‌ಗಳಂತಹ ಪೌಷ್ಟಿಕ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿರುತ್ತಾರೆ. ಇದು ಕ್ಯಾಲ್ಸಿಯಂ ಸೇವನೆಯನ್ನು ಕಡಿಮೆ ಮಾಡುತ್ತದೆ. ಕಾಲಾನಂತರದಲ್ಲಿ ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ.
ದೇಹಕ್ಕೆ ಕ್ಯಾಲ್ಸಿಯಂನ ಅಗತ್ಯವಿರುತ್ತದೆ. ಆಹಾರದಿಂದ ಇದನ್ನು ಸಾಕಷ್ಟು ಪಡೆಯದಿದ್ದರೆ ಅದು ಮೂಳೆಗಳಿಂದ ಪಡೆದುಕೊಳ್ಳುತ್ತದೆ. ತಂಪು ಪಾನೀಯಗಳ ಸೇವನೆಯಿಂದ ದೇಹಕ್ಕೆ ಬೇಕಾದಷ್ಟು ಕ್ಯಾಲ್ಸಿಯಂ ಸಿಗುವುದಿಲ್ಲ. ಕಾಲಾನಂತರದಲ್ಲಿ ಇದು ದುರ್ಬಲ ಮೂಳೆಗಳಿಗೆ ಕಾರಣವಾಗುತ್ತದೆ.
ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಇನ್ನೂ ಅಧಿಕ
ಮಹಿಳೆಯರು ಸಕ್ಕರೆ ಪಾನೀಯಗಳ ವ್ಯಸನಿಯಾಗಿದ್ದರೆ ಇನ್ನೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಮಹಿಳೆಯರ ವಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಮೂಳೆ ಸವೆಯುವ ಅಪಾಯವನ್ನು ಹೆಚ್ಚಿಸುತ್ತದೆ. ಇತರ ಮೂಲಗಳಿಂದ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯದೆ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ಮೂಳೆ ಸವೆಯುವ ಅಪಾಯ ಮತ್ತಷ್ಟು ವೇಗವಾಗಬಹುದು.
ನಿತ್ಯ ತಂಪು ಪಾನೀಯವನ್ನು ಸೇವಿಸುವುದು ವಿಶೇಷವಾಗಿ ಮಕ್ಕಳು, ಹದಿಹರೆಯದವರು ಮತ್ತು ವಯಸ್ಸಾದ ವ್ಯಕ್ತಿಗಳಿಗೆ ಹಾನಿಕಾರಕವಾಗಿದೆ. ಹದಿಹರೆಯದವರು ತಮ್ಮ ಬೆಳವಣಿಗೆಯ ನಿರ್ಣಾಯಕ ವರ್ಷಗಳಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಮೂಳೆ ಸಾಂದ್ರತೆಯನ್ನು ನಿರ್ಮಿಸಲು ಸಾಕಷ್ಟು ಕ್ಯಾಲ್ಸಿಯಂನ ಅಗತ್ಯವಿರುತ್ತದೆ. ಈ ಅವಧಿಯಲ್ಲಿ ತಂಪು ಪಾನೀಯಗಳನ್ನು ಸೇವಿಸುವುದರಿಂದ ಅದಕ್ಕೆ ತಡೆಯಾಗುತ್ತದೆ. ಮಹಿಳೆಯರ ಋತುಬಂಧದ ಮೇಲೂ ಇದು ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನ ಹಿರಿಯ ಸಲಹೆಗಾರ ಮೂಳೆ ಶಸ್ತ್ರಚಿಕಿತ್ಸಕ ಡಾ. ಕಿರಣ್ ಖಾರತ್.
ಸಕ್ಕರೆ ಮುಕ್ತ ತಂಪು ಪಾನೀಯ
ಸಕ್ಕರೆ ಮುಕ್ತ ತಂಪು ಪಾನೀಯ ಸೇವನೆ ಮೂಳೆಯ ಆರೋಗ್ಯದ ಸಮಸ್ಯೆಯನ್ನು ದೂರ ಮಾಡಬಹುದು ಎಂದು ಯೋಚಿಸುತ್ತಿದ್ದರೆ ಅದು ತಪ್ಪು. ಯಾಕೆಂದರೆ ಸೋಡಾಗಳಲ್ಲಿ ಫಾಸ್ಪರಿಕ್ ಆಮ್ಲ ಮತ್ತು ಕೆಫೀನ್ ಇದ್ದೇ ಇರುತ್ತದೆ. ಇದು ಮೂಳೆಯನ್ನು ದುರ್ಬಲಗೊಳಿಸುತ್ತದೆ. ಇದಲ್ಲದೆ ಕೃತಕ ಸಿಹಿಕಾರಕಗಳು ಕರುಳಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.
Cancer Care: ಗರ್ಭಾವಸ್ಥೆಯಲ್ಲಿ ಕಾಡುವ ಸ್ತನ ಕ್ಯಾನ್ಸರ್ ಕಂಡು ಹಿಡಿಯುವುದು ಹೇಗೆ?
ಮಿತಿ ನಿಗದಿಪಡಿಸಿ ಬಳಿಕ ತ್ಯಜಿಸಿ
ಸಣ್ಣ ಲೋಟದಲ್ಲಿ ತಂಪು ಪಾನೀಯ ಸೇವನೆ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ ಇದನ್ನು ತ್ಯಜಿಸುವುದು ಅತ್ಯುತ್ತಮ. ಇದಕ್ಕಾಗಿ ನಿಧಾನವಾಗಿ ಕಡಿಮೆ ಮಾಡಿ ಬಳಿಕ ಕ್ರಮೇಣ ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.