Wednesday, 30th October 2024

Karva Chauth 2024: ಮಾರುಕಟ್ಟೆಗೆ ಉತ್ತೇಜನ ತಂದ ಕರ್ವ ಚೌತ್‌; ದಾಖಲೆಯ 22,000 ಕೋಟಿ ರೂ. ವಹಿವಾಟಿನ ನಿರೀಕ್ಷೆ

Karva Chauth 2024

ಹೊಸದಿಲ್ಲಿ: ಉತ್ತರ ಭಾರತದ ಪ್ರಸಿದ್ಧ ಕರ್ವ ಚೌತ್‌ ಹಬ್ಬ ನಾಳೆ (ಅಕ್ಟೋಬರ್‌ 20) ನಡೆಯಲಿದ್ದು, ಈ ವೇಳೆ ದೇಶಾದ್ಯಂತ ಬರೋಬ್ಬರಿ 22,000 ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟು ನಡೆಯಲಿದೆ (Karva Chauth 2024). ಕಳೆದ ವರ್ಷ ಕರ್ವ ಚೌತ್‌ ವೇಳೆ ಸುಮಾರು 15,000 ಕೋಟಿ ರೂ.ಗಳ ವಹಿವಾಟು ನಡೆದಿತ್ತು. ಈ ಬಾರಿ ಸುಮಾರು 7,000 ಕೋಟಿ ರೂ.ಗಿಂತ ಹೆಚ್ಚಿನ ವ್ಯಾಪಾರ ನಡೆಯುವ ಸಾಧ್ಯತೆ ಇದೆ. ಈ ಅಂಕಿ-ಅಂಶ ಹಬ್ಬದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಜತೆಗೆ ಬೆಸೆದುಕೊಂಡಿರುವ ಆರ್ಥಿಕ ಚಟುವಟಿಕೆಯನ್ನೂ ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ವ ಚೌತ್ ದೇಶದ ಹಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಭಾರತದ ಕಡೆಗಳಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಹಬ್ಬವಾಗಿದ್ದು, ಈ ದಿನದಂದು ಹೆಚ್ಚಾಗಿ ವಿವಾಹಿತ ಹಿಂದೂ ಮಹಿಳೆಯರು ತಮ್ಮ ಸಂಗಾತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಉಪವಾಸ ಮಾಡುತ್ತಾರೆ. ಇದು ಈಗ ಪ್ರಮುಖ ಆರ್ಥಿಕ ಚಟುವಟಿಕೆಯ ಹಬ್ಬವಾಗಿ ಮಾರ್ಪಟ್ಟಿದೆ.

ಏನಿದು ಕರ್ವ ಚೌತ್‌?

ಕಾರ್ತಿಕ ಮಾಸದಲ್ಲಿ ಬರುವ ಕರ್ವ ಚೌತ್‌ಗೂ ನಮ್ಮಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಭೀಮನ ಅಮಾವಾಸ್ಯೆಗೂ ಸಾಮ್ಯತೆ ಇದೆ. ಕೇವಲ ವಿವಾಹವಾದ ಮಹಿಳೆಯರಷ್ಟೇ ಅಲ್ಲದೇ ಅವಿವಾಹಿತ ಯುವತಿಯರೂ ಸಹ ಕರ್ವ ಚೌತ್‌ ಆಚರಿಸುತ್ತಾರೆ. ಅವಿವಾಹಿತ ಯುವತಿಯರು ಕರ್ವ ಚೌತ್‌ ಆಚರಿಸುವುದರಿಂದ ತಮ್ಮ ಇಚ್ಛೆಗೆ ತಕ್ಕಂತಹ ಪತಿ ಸಿಗುತ್ತಾರೆ ಎಂಬ ನಂಬಿಕೆ ಇದೆ. ಸಂಜೆ ವೇಳೆಗೆ ವಿವಾಹಿತ ಹೆಂಗಸರು ಒಂದೆಡೆ ಸೇರಿ ಕರ್ವ ಚೌತ್‌ನ ಕಥೆಯನ್ನು ಕೇಳುತ್ತಾರೆ. ಶಿವ ಮತ್ತು ಪಾರ್ವತಿಯನ್ನು ಪೂಜಿಸುವ ಈ ದಿನದಂದು ಗೌರ್ ಮಾತಾ ಅಥವಾ ಕರ್ವ ಮಾತೆಯ ಮೂರ್ತಿಯನ್ನು ಪೂಜಿಸುವುದು ರೂಢಿಯಲ್ಲಿದೆ.

ದಿಲ್ಲಿಯ ಚಾಂದಿನಿ ಚೌಕ್‌ನ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಮಾತನಾಡಿ, ʼʼಈ ವರ್ಷದ ಕರ್ವ ಚೌತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ʼವೋಕಲ್ ಫಾರ್ ಲೋಕಲ್ʼ ಯೋಜನೆಯ ಉತ್ತೇಜನಕ್ಕೆ ಬಳಸಲಾಗಿದೆ. ಇದು ದೇಶೀಯವಾಗಿ ಉತ್ಪಾದಿಸಿದ ಸರಕುಗಳ ಬಳಕೆಯನ್ನು ಉತ್ತೇಜಿಸುತ್ತದೆʼʼ ಎಂದು ತಿಳಿಸಿದ್ದಾರೆ.

ಹಬ್ಬದ ಮುನ್ನಾ ದಿನವಾದ ಶನಿವಾರ ರಾಷ್ಟ್ರವ್ಯಾಪಿ ಮಾರುಕಟ್ಟೆಗಳಲ್ಲಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಆಭರಣಗಳು, ಉಡುಗೆಗಳು, ಸೌಂದರ್ಯವರ್ಧಕಗಳು ಮತ್ತು ಪೂಜಾ ಸಾಮಗ್ರಿ ಸೇರಿದಂತೆ ಆಚರಣೆಗೆ ಸಂಬಂಧಿಸಿದ ವಸ್ತುಗಳ ಖರೀದಿಗಾಗಿ ಗ್ರಾಹಕರು ಮುಗಿ ಬಿದ್ದಿದ್ದು, ನಗರಗಳಲ್ಲಿ ಹೆಚ್ಚಿನ ಜನ ಸಂದಣಿ ಕಂಡು ಬಂದಿದೆ. ಕೆಂಪು ಗಾಜಿನ ಬಳೆಗಳು, ಉಂಗುರಗಳು, ಲಾಕೆಟ್‌ಗಳು ಮತ್ತು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಕರ್ವ ಥಾಲಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ದಿಲ್ಲಿ ಒಂದರಲ್ಲೇ ವಹಿವಾಟು ಸುಮಾರು 4,000 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದೆ. ಇನ್ನು ಮೆಹೆಂದಿ ಕಲಾವಿದರಿಗೂ ಇನ್ನಿಲ್ಲದ ಬೇಡಿಕೆ ಕಂಡು ಬಂದಿದ್ದು, ದಿಲ್ಲಿಯ ಕೊನಾಟ್ ಪ್ಲೇಸ್‌ನ ಹನುಮಾನ್ ದೇವಾಲಯದಂತಹ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Extreme Poverty: ಭಾರತದಲ್ಲಿ ಬಡತನ ನಿರ್ಮೂಲನೆಯಾಗುತ್ತಿದೆ ಎಂದಿದೆ ವಿಶ್ವಸಂಸ್ಥೆ