Friday, 22nd November 2024

Maoist IED Attack: ನಕ್ಸಲರಿಂದ IED ಸ್ಫೋಟ; ಇಬ್ಬರು ಯೋಧರು ಹುತಾತ್ಮ

Maoist attack

ನವದೆಹಲಿ: ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ(Maoist IED Attack)ಗೊಂಡ ಪರಿಣಾಮ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಶನಿವಾರ ಐಟಿಬಿಪಿ, ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ತಂಡಗಳು ಧುರಬೇಡದಲ್ಲಿ ಕಾರ್ಯಾಚರಣೆ ನಡೆಸಿ ನಾರಾಯಣಪುರಕ್ಕೆ ಹಿಂತಿರುಗುತ್ತಿದ್ದವು. ಅಬುಜ್ಮದ್ ಪ್ರದೇಶದ ಕೊಡ್ಲಿಯಾರ್ ಗ್ರಾಮದ ಬಳಿ ಮಧ್ಯಾಹ್ನ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದೆ.

ಮಹಾರಾಷ್ಟ್ರದ ಸತಾರಾ ಮೂಲದ ಅಮರ್ ಪನ್ವಾರ್ ಮತ್ತು ಆಂಧ್ರಪ್ರದೇಶದ ಕಡಪಾ ಮೂಲದ ಕೆ ರಾಜೇಶ್ ಎಂಬ ಇಬ್ಬರು ಐಟಿಬಿಪಿ ಯೋಧರು ಮೃತಪಟ್ಟಿದ್ದಾರೆ. ಪನ್ವಾರ್ ಮತ್ತು ರಾಜೇಶ್ ಇಬ್ಬರೂ 36 ವರ್ಷ ವಯಸ್ಸಿನವರಾಗಿದ್ದರು ಮತ್ತು ಐಟಿಬಿಪಿಯ 53 ನೇ ಬೆಟಾಲಿಯನ್‌ನ ಭಾಗವಾಗಿದ್ದರು. ನಾರಾಯಣಪುರ ಜಿಲ್ಲಾ ಪೊಲೀಸ್‌ನಿಂದ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಸ್ಥಿರರಾಗಿದ್ದಾರೆ ಎಂದು ವರದಿಯಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಪೊಲೀಸರಿಗೆ ಮಾಹಿತಿ ನೀಡುವವರು (Police Informers) ಎಂದು ಶಂಕಿಸಿ ಇಬ್ಬರನ್ನು ಮಾವೋವಾದಿಗಳು (Maoists Attack) ನೇಣು ಬಿಗಿದು ಕೊಂದ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ( Bijapur district of Chattisgarh) ಹಳ್ಳಿಯೊಂದರಲ್ಲಿ ನಡೆದಿತ್ತು.

ಬಿಜಾಪುರ ಜಿಲ್ಲೆಯ ಮಿರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪೆಮಾರ್ಕ ಗ್ರಾಮದಿಂದ ಶಾಲಾ ವಿದ್ಯಾರ್ಥಿ ಸೇರಿದಂತೆ ಮೂವರು ಗ್ರಾಮಸ್ಥರನ್ನು ನಕ್ಸಲೀಯರು ಮಂಗಳವಾರ ಅಪಹರಿಸಿದ್ದರು. ಅನಂತರ ನಕ್ಸಲೀಯರು ‘ಜನ್ ಅದಾಲತ್’ ನಡೆಸುವ ಮೂಲಕ ಇಬ್ಬರನ್ನು ಮರಕ್ಕೆ ನೇಣು ಹಾಕಿದ್ದಾರೆ. ಆದರೆ ಶಾಲಾ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಿದ್ದಾರೆ.

ನೇಣಿಗೆ ಒಳಗಾದ ಮೃತ ಗ್ರಾಮಸ್ಥರನ್ನು ಮದ್ವಿ ಸುಜಾ ಮತ್ತು ಪೊಡಿಯಂ ಕೋಸ ಎಂದು ಗುರುತಿಸಲಾಗಿದೆ.
ಮಾವೋವಾದಿಗಳ ಭೈರಾಮ್‌ಗಢ ಪ್ರದೇಶ ಸಮಿತಿಯು ಈ ಕೊಲೆಯನ್ನು ಮಾಡಿರುವುದಾಗಿ ಹೇಳಿಕೊಂಡಿದೆ. ಇವರಿಬ್ಬರು ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅದು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ ಕೂಡಲೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Tourism Village: ʼನಕ್ಸಲ್‌ ಪೀಡಿತ ಪ್ರದೇಶʼ ಆಗಿದ್ದ ಕುತ್ಲೂರು ಈಗ ‘ಶ್ರೇಷ್ಠ ಪ್ರವಾಸಿ ಗ್ರಾಮ’; ಕೇಂದ್ರ ಸರ್ಕಾರದಿಂದ ನಾಳೆ ಗೌರವ