Friday, 22nd November 2024

Jharkhand Assembly Election: ಬಿಜೆಪಿ ಮೊದಲ ಪಟ್ಟಿ ರಿಲೀಸ್‌; ಮಾಜಿ ಸಿಎಂಗಳಾದ ಬಾಬುಲಾಲ್ ಮರಾಂಡಿ, ಚಂಪೈ ಸೊರೆನ್‌ಗೆ ಕಣಕ್ಕೆ

jharkhand election

ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ(Jharkhand Assembly Election)ಗೆ ಭಾರತೀಯ ಜನತಾ ಪಕ್ಷ (BJP) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 66 ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿದ್ದು, ಜಾರ್ಖಂಡ್‌ನ ಮಾಜಿ ಸಿಎಂಗಳಾದ ಬಾಬುಲಾಲ್ ಮರಾಂಡಿ ಮತ್ತು ಚಂಪೈ ಸೊರೆನ್ ಹೆಸರು ಪಟ್ಟಿಯಲ್ಲಿದೆ. ಧನ್ವಾರ್ ಕ್ಷೇತ್ರದಿಂದ ಬಾಬುಲಾಲ್ ಮರಾಂಡಿ(Babulal Marandi) ಸ್ಪರ್ಧಿಸಲಿದ್ದು, ಸಾರೈಕೆಲಾ ಕ್ಷೇತ್ರದಿಂದ ಚಂಪೈ ಸೊರೆನ್(Champai Soren) ಕಣಕ್ಕಿಳಿಯುತ್ತಿದ್ದಾರೆ.

ಪಕ್ಷದ ಪ್ರಮುಖರಾದ ಸೀತಾ ಸೊರೆನ್ ಜಮ್ತಾರಾದಿಂದ ಕಣಕ್ಕಿಳಿದಿದ್ದು, ನೀರಾ ಯಾದವ್ ಕೊಡರ್ಮಾದಿಂದ ಸ್ಪರ್ಧಿಸಲಿದ್ದಾರೆ. ಗಂಡೆಯಲ್ಲಿ ಮುನಿಯಾ ದೇವಿ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಸಿಂದ್ರಿಯಲ್ಲಿ ತಾರಾದೇವಿ ಹಾಗೂ ನಿರ್ಸಾದಲ್ಲಿ ಅಪ್ನರ್ನಾ ಸೇನ್‌ಗುಪ್ತಾ ಕಣಕ್ಕಿಳಿಯಲಿದ್ದಾರೆ. ರಾಗಿಣಿ ಸಿಂಗ್ ಝರಿಯಾದಲ್ಲಿ ಪಕ್ಷವನ್ನು ಪ್ರತಿನಿಧಿಸಲಿದ್ದು, ಗೀತಾ ಬಲ್ಮುಚು ಚೈಬಾಸಾದಲ್ಲಿ ಮತ್ತು ಪುಷ್ಪಾ ದೇವಿ ಭೂಯಿಯಾನ್ ಛತ್ತರ್‌ಪುರದಿಂದ ಸ್ಪರ್ಧಿಸಲಿದ್ದಾರೆ.

ವಿಧಾನಸಭಾ ಚುನಾವಣೆ(Jharkhand Assembly Election)ಗೆ ಸಜ್ಜಾಗುತ್ತಿರುವ ಜಾರ್ಖಂಡ್‌ನಲ್ಲಿ ಎನ್‌ಡಿಎ(NDA) ಮೈತ್ರಿಕೂಟ ಶುಕ್ರವಾರ ಸೀಟು ಹಂಚಿಕೆ(Seat Sharing) ಘೋಷಿಸಿದೆ. ಮುಂಬರುವ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಮಿತ್ರಪಕ್ಷಗಳು 13 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿವೆ. ಈ ಬಾರೀ ಬಿಜೆಪಿ, ಅಖಿಲ ಜಾರ್ಖಂಡ್‌ ವಿದ್ಯಾರ್ಥಿ ಘಟನೆ(AJSU), ಜನತಾದಳ ಯನೈಟೆಡ್‌(JDU), ಲೋಕ ಜನಶಕ್ತಿ ಪಕ್ಷ(ರಾಮ ವಿಲಾಸ್‌)ಗಳು ಜಂಟಿಯಾಗಿ ಕಣಕ್ಕಿಳಿಯುತ್ತಿವೆ.

ರಾಂಚಿಯ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಎಜೆಎಸ್‌ಯು ಪಕ್ಷದೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆಯನ್ನು ಪ್ರಕಟಿಸಿದ ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಜಾರ್ಖಂಡ್ ಚುನಾವಣಾ ಸಹ-ಪ್ರಭಾರಿ ಹಿಮಂತ್‌ ಬಿಸ್ವಾ ಶರ್ಮಾ, ಎಜೆಎಸ್‌ಯು 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ನಾವು ಒಮ್ಮತಕ್ಕೆ ಬಂದಿದ್ದೇವೆ. ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್‌ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದರು.

ಎಜೆಎಸ್‌ಯು ಸಿಲ್ಲಿ, ರಾಮ್‌ಗಢ, ಗೋಮಿಯಾ, ಜುಗ್ಸಲೈ (ಎಸ್‌ಸಿ), ಇಚಗಢ, ಲೋಹರ್ದಗಾ (ಎಸ್‌ಟಿ), ಪಾಕುರ್, ಮನೋಹರಪುರ (ಎಸ್‌ಟಿ), ಮಾಂಡು ಮತ್ತು ಡುಮ್ರಿ ಸ್ಪರ್ಧಿಸಲಿದೆ. ಜೆಡಿಯು ಜಮ್‌ಸೆಧ್‌ಪುರ ಪಶ್ಚಿಮ ಮತ್ತು ತಮರ್ (ಎಸ್‌ಟಿ) ಸ್ಪರ್ಧಿಸಲಿದ್ದು, ಎಲ್‌ಜೆಪಿ (ಆರ್) ಚತ್ರಾ (ಎಸ್‌ಸಿ) ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ. 2019 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ, ಜೆಎಂಎಂ ಮತ್ತು ಕಾಂಗ್ರೆಸ್‌ ಜಂಟಿಯಾಗಿ ಸ್ಪರ್ಧಿಸಿ ನೇತೃತ್ವದ ಮೈತ್ರಿಕೂಟವು 47 ಸ್ಥಾನಗಳನ್ನು ಗೆದ್ದಿದ್ದವು. ಜೆಎಂಎಂಗೆ 30 ಮತ್ತು ಕಾಂಗ್ರೆಸ್‌ಗೆ 16 ಸ್ಥಾನಗಳಿ ಲಭಿಸಿತ್ತು. ಬಿಜೆಪಿ 25 ಸ್ಥಾನಗಳನ್ನು ಪಡೆದುಕೊಂಡರೆ, ಜೆವಿಎಂ-ಪಿ 3, ಎಜೆಎಸ್‌ಯು ಪಕ್ಷ 2, ಸಿಪಿಐ-ಎಂಎಲ್ 1, ಎನ್‌ಸಿಪಿ 1 ಮತ್ತು ಸ್ವತಂತ್ರರು 2 ಸ್ಥಾನಗಳನ್ನು ಪಡೆದಿದ್ದರು.

ಈ ಸುದ್ದಿಯನ್ನೂ ಓದಿ:Jharkhand Assembly Election: ಜಾರ್ಖಂಡ್‌ ಚುನಾವಣೆ-NDA ಸೀಟು ಹಂಚಿಕೆ ಫೈನಲ್‌; 68 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ