Wednesday, 30th October 2024

ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ

ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಪ್ರಸಕ್ತ ವರ್ಷದಲ್ಲಿ ಮಕ್ಕಳು ಶಾಲಾ ಪಾಠಗಳಿಂದ ವಂಚಿತರಾಗಿದ್ದಾರೆ, ಅನೇಕರು ಆನ್ ಲೈನ್ ಮೂಲಕ ಪಾಠಗಳನ್ನು ಆಲಿಸುತ್ತಿದ್ದಾರೆ ಆದರೆ ಈ ಅವಕಾಶವಿಲ್ಲದ ಬಹಳಷ್ಟು ಮಕ್ಕಳಿದ್ದಾರೆ ಅಂತಹ ಮಕ್ಕಳ ಬಾಲ್ಯ,ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವುದು ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.

ಇಲ್ಲಿನ ಉಪನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾಡಳಿತ, ಮಕ್ಕಳ ಸಹಾಯವಾಣಿ 1098 ಸಿಐಎಫ್ ಹಾಗೂ ಇತರೆ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಸಹಾಯವಾಣಿ ಯೊಂದಿಗೆ ಗೆಳೆತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಮಕ್ಕಳೂ ಬಾಲ್ಯ ,ಶಿಕ್ಷಣದಿಂದ ವಂಚಿತರಾಗಬಾರದು. ಕೋವಿಡ್ ಕಾರಣದಿಂದ ಆರ್ಥಿಕ ಬೆಳವಣಿಗೆಗೆ ಹಿನ್ನಡೆಯಾಗಿ ರುವ ಹಿನ್ನೆಲೆಯಲ್ಲಿ ಅನೇಕ ಮಕ್ಕಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಬಗ್ಗೆ ಸಾರ್ವಕನಿಕರಿಂದ ದೂರುಗಳು ಬರುತ್ತಿವೆ. ಅಂತಹ ಮಕ್ಕಳನ್ನು ರಕ್ಷಿಸಲು ಕ್ರಮವಹಿಸಲಾಗಿದೆ. ಪ್ರಜ್ಞಾವಂತ ನಾಗರಿಕರು ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಕೂಡಲೇ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

ಮಕ್ಕಳ ಸಹಾಯವಾಣಿ 1098 , ಪೋಕ್ಸೋ ಕಾಯ್ದೆ 2012 , ಬಾಲ್ಯವಿವಾಹ ,ಬಾಲ ಕಾರ್ಮಿಕ ಪದ್ಧತಿಯಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ಜರುಗಿದವು.

ಬಿಡಿಎಸ್ ಎಸ್ ಸಂಸ್ಥೆ ನಿರ್ದೇಶಕ ಫಾ.ಯುಜಿಬಿಯೋ ಫರ್ನಾಂಡೀಸ್ ಸಾನಿಧ್ಯ ವಹಿಸಿದ್ದರು. ವಾಕರಸಾಸಂ ವಿಭಾಗೀಯ ನಿಯಂತ್ರಕ ಬಸವಲಿಂಗಪ್ಪ ಬೀಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ಹಂಚಾಟೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಹೆಚ್.ಲಲಿತಾ, ಡಾ.ಉಮೇಶ ಹಳ್ಳಿಕೇರಿ, ಜಿಲ್ಲಾ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಾಳಾಗೌಡ ಪಾಟೀಲ, ಕಲಘಟಗಿ ಕಲ್ಯಾಣ ಕಿರಣ ಸಂಸ್ಥೆಯ ಬಿ.ವೈ.ಪೊಲೀಸ್ ಪಾಟೀಲ, ಸ್ನೇಹಾ ಶಿಕ್ಷಣ ಸಂಸ್ಥೆಯ ನಾಗರತ್ನ ಜೇಡದ,ಕುಂದಗೋಳ ಕರ್ಮಣಿ ಸಂಸ್ಥೆಯ ಎನ್.ಬಿ. ಹೊಸಮನಿ, ಸಂಕಲ್ಪ ಪ್ರಕಾಶ ಹೂಗಾರ ಮತ್ತಿತರರು ವೇದಿಕೆಯಲ್ಲಿದ್ದರು.

ಶಿವಲೀಲಾ ಗಾಯಕವಾಡ ಸ್ವಾಗತಿಸಿದರು, ಪೀಟರ್ ಆಶೀರ್ವಾದ ಪ್ರಾಸ್ತಾವಿಕ ಮಾತನಾಡಿದರು, ರವಿ ಭಂಡಾರಿ, ಚಂದ್ರಶೇಖರ ರಾಹುತರ್ ಕಾರ್ಯಕ್ರಮ ನಿರ್ವಹಿಸಿದರು.