Saturday, 23rd November 2024

Minister Krishnabyregowda: ಬಗರ್ ಹುಕುಂ ಸಾಗುವಳಿ ಹಕ್ಕು ಪತ್ರ ನೀಡಲು ವಿಳಂಬ: ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಘೇರಾವ್, ಪ್ರತಿಭಟನೆ

ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಬಗರ್ ಹುಕ್ಕುಂ ಸಾಗುವಳಿದಾರರು ನಮೂನೆ-53, 57 ಹಾಗೂ 59 ರಲ್ಲಿ ಅರ್ಜಿಸಲ್ಲಿಸಿದವರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ( ಪ್ರೊ.ನಂಜು0ಡ ಸ್ವಾಮಿ)  ಬಣದ ಕಾರ್ಯಕರ್ತರು  ಶುಕ್ರವಾರ ಬೆಂಗಳೂರಿನ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ತೆರಳಿದ್ದೇವೆ ಎಂದು ತಾಲ್ಲೂಕು ಅಧ್ಯಕ್ಷ ವೆಂಕಟ ಶಿವಾರೆಡ್ಡಿ ತಿಳಿಸಿದರು.

ಈ ವೇಳೆ ಮಾತನಾಡಿದ ಅವರು ತಾಲೂಕಿನಲ್ಲಿ ಬಗರ್ ಹುಕ್ಕುಂ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದಾರೆ. ಬಡ ಜನರು ಕುಟುಂಬದ ನಿರ್ವಹಣೆ ಮಾಡುವ ಮತ್ತು ಹಸಿವು ನೀಗಿಸಿಕೊಳ್ಳುವ ಉದ್ದೇಶದಿಂದ ಭೂಮಿ ಉಳುಮೆ ಮಾಡಿಕೊಂಡಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಜಮೀನಿನ ಮಾಲೀಕರು ಫಾರಂ 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅವರೆಲ್ಲರಿಗೂ ಕೂಡಲೇ  ತಾಲೂಕು ಆಡಳಿತ ಹಕ್ಕು ಪತ್ರ ವಿತರಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಂದಾಯ ಸಚಿವ ಮನೆ ಮುಂದೆ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದೇವೆ ಎಂದು ಹೇಳಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ವಿಳಂಬ ಆಗುತ್ತಿರುವುದನ್ನು ಖಂಡಿಸಿ ಕರ್ನಾಟಕ  ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ತಾಲೂಕಿನಾದ್ಯಂತ  ಸಾವಿರಾರು ಬಡ ಹಾಗೂ ರೈತ ಮತ್ತು ಭೂ ರಹಿತರು ಸರ್ಕಾರಿ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೂ ಕೂಡ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದುಕೊಂಡು ರೈತರ ಮೇಲೆ ಕೇಸ್ ದಾಖಲಿಸು ತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದರು.

ಗೌರವಾದ್ಯಕ್ಷ ಲಕ್ಷ್ಮೀನರಸಪ್ಪ ಮಾತನಾಡಿ ಅರಣ್ಯ ಇಲಾಖೆಯ ದಬ್ಬಾಳಿಕೆ ಮಿತಿ ಮೀರಿ ಹೋಗಿದೆ. ಭೂಮಿ ಪಡೆದುಕೊಳ್ಳುವುದೇ ಅವರ ಕೆಲಸವಾಗಿದೆ. ಇದು ನಿರಂತರವಾಗಿ ನಡೆಯುತ್ತಿದೆ. ಈ ಕುರಿತಂತೆ ಜಿಲ್ಲಾಡಳಿತ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ರೈತರ ಮೇಲೆ ದಾಖಲು ಮಾಡಿರುವ ಸುಳ್ಳು ಪ್ರಕರಣಗಳನ್ನು ಸರಕಾರ ಕೂಡಲೇ ವಾಪಸ್ ಪಡೆಯಬೇಕು. ಅವರು ನೆಮ್ಮದಿಯಿಂದ ಜೀವನ ಮಾಡಲು ಬಿಡಬೇಕಿದೆ. ಅದುಬಿಟ್ಟು ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡುತ್ತಿರುವುದು ಮಾರಕ ಬೆಳವಣಿಗೆಯಾಗಿದೆ ಎಂದು ಹೇಳಿದರು.

ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕಿದೆ. ಒಂದು ವೇಳೆ ನೀವು ವಿಳಂಬ ಧೋರಣೆ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ಜಿಲ್ಲಾ ಜಿಲ್ಲೆಗಳಲ್ಲಿ ಉಗ್ರವಾಗಿ ಹೋರಾಟ ನಡೆಸುವುದಾಗಿ  ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆ ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ: S M Krishna: ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು