Monday, 25th November 2024

Bangaru Hanumanthu : ನಟ ಬಂಗಾರು ಹನುಮಂತು ಸಂಡೂರು ಬಿಜೆಪಿ ಅಭ್ಯರ್ಥಿ; ಸ್ಯಾಂಡಲ್‌ವುಡ್ ನಟನ ವಿವರ ಇಲ್ಲಿದೆ

Actor Bangaru Hanumanthu

ಬೆಂಗಳೂರು: ಸಂಡೂರು ಉಪಚುನಾವಣೆ ರಂಗೇರುತ್ತಿದೆ. ಬಿಜೆಪಿಯಿಂದ ಸ್ಯಾಂಡಲ್‌ವುಡ್‌ ಬಂಗಾರು ಹನುಮಂತು (Bangaru Hanumanthu) ಟಿಕೆಟ್ ಪಡೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ನಟರಾಗಿದ್ದ ಅವರು ಇದೀಗ ರಾಜಕಾರಣಕ್ಕೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲೀಗ ಸಂಡೂರು ಕ್ಷೇತ್ರಕ್ಕೆ ಎಸ್‌ಟಿ ಸಮುದಾಯದ ಬಂಗಾರು ಹನುಮಂತುಗೆ ಟಿಕೆಟ್‌ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಹನುಮಂತ್ ಸ್ಯಾಂಡಲ್‌ವುಡ್‌ನ ನಟರಾಗಿಯೂ ಖ್ಯಾತಿ ಪಡೆದಿದ್ದರು.

ಬಂಗಾರು ಅವರು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅತಿ ಎತ್ತರದ ನಟ ಎನ್ನುವ ಕೀರ್ತಿಗೂ ಪಾತ್ರರಾಗಿದ್ದ. ಬಂಗಾರು ಹನುಮಂತು ಅವರ 6 ಅಡಿ 4 ಇಂಚು ಇದ್ದಾರೆ. ಸಾಯಿ ಪ್ರಕಾಶ್‌ ಅವರ 98ನೇ ಚಿತ್ರದಲ್ಲಿ ನಾಯಕರಾಗಿ ಇವರು ನಟಿಸಿದ್ದರು. ಮನ ಮೆಚ್ಚಿದ ಬಂಗಾರು ಸಿನಿಮಾದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿದ್ದರು. ಅಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ಅವರು ರಾಜಕೀಯಕ್ಕೆ ಪ್ರವೇಶ ಪಡೆದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹನುಮಂತು ಅವರು ಮನ ಮೆಚ್ಚಿದ ಬಂಗಾರು ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಮನೆಯವರಿಗೆ ರಹಸ್ಯವಾಗಿ ಇಟ್ಟಿದ್ದರು. ಚಿತ್ರದ ಶೂಟಿಂಗ್ ಮುಗಿದ ನಂತರವಷ್ಟೇ ಪತ್ನಿ ಮತ್ತು ಪೋಷಕರಿಗೆ ತಿಳಿಸಿದ್ದರು. ಹನುಮಂತು ಅವರು ಈ ಚಿತ್ರದ ಬಳಿಕ ಆರ್ಯಪುತ್ರ ಅನ್ನೋ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಸಿನಿಮಾ ರಿಲೀಸ್‌ ಆಗಲಿಲ್ಲ ಎನ್ನಲಾಗುತ್ತಿದೆ. ಚಿತ್ರಗಳಲ್ಲಿ ರೋಜಾ, ರವಿಶಂಕರ್, ಶೋಭರಾಜ್ ಮತ್ತು ಸಾಧು ಕೋಕಿಲ ಕೂಡ ನಟಿಸಿದ್ದರು.

ಎಲ್ಲಿಯವರು ಬಂಗಾರು?

ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯವರಾದ ಬಂಗಾರು ಹನುಮಂತು ಅವರ ತಂದೆ ಬಂಗಾರು ಸೋಮಣ್ಣ ಕೆಎಸ್‌ಆರ್‌ಟಿಸಿ ಚಾಲಕರಾಗಿ ನಿವೃತ್ತಿ ಹೊಂದಿದ್ದಾರೆ. ಸೋಮಣ್ಣ ಅವರು ಕೊನೆಯದಾಗಿ ಕೂಡ್ಲಿಗಿಯಲ್ಲಿ ಸೇವೆ ಸಲ್ಲಿಸಿದ್ದ ಕಾರಣ ಕೂಡ್ಲಿಗಿಯಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ: Nikhil Kumaraswamy: ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌-ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ: ನಿಖಿಲ್

ತಾಯಿ ಹುಲಿಗೆಮ್ಮ ಸದ್ಯ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರು . ಬಂಗಾರು ಹನುಮಂತು ವಿದ್ಯಾರ್ಥಿ ಜೀವನ ಕೂಡ್ಲಿಗಿಯಲ್ಲಿ ಕಳೆದಿದ್ದಾರೆ. ಬಿಎ, ಬಿಎಡ್ ಓದಿರುವ ಬಂಗಾರು ವಿದ್ಯಾರ್ಥಿ ಹೋರಾಟದ ಮೂಲಕ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬಂಗಾರು ಹನುಮಂತು ವಿದ್ಯಾರ್ಥಿ ಜೀವನ ಕೂಡ್ಲಿಗಿಯಲ್ಲಿ ಕಳೆದಿದೆ. ಬಿಎ, ಬಿಎಡ್ ಓದಿರುವ ಬಂಗಾರು ವಿದ್ಯಾರ್ಥಿ ಜೀವನದಿಂದ ಹೋರಾಟದಲ್ಲಿ ಭಾಗಿಯಾಗುತ್ತಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

2018ರಲ್ಲಿ ಸಂಡೂರು ಕ್ಷೇತ್ರದಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 2023ರ ವಿಧಾನಸಭಾ ಚುನಾವಣೆ ವೇಳೆ ಕೂಡ್ಲಿಗಿ ಕ್ಷೇತ್ರಕ್ಕೆ ಪ್ರಯತ್ನ ಮಾಡಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ. ಕಲ್ಲಿನ ಕ್ರಷರ್, ಗಣಿಗಾರಿಕೆ ವ್ಯವಹಾರ ಮಾಡುತ್ತಿರುವ ಅವರ ಕೃಷಿ ಜಮೀನು ಹೊಂದಿದ್ದಾರೆ. ಪ್ರಹ್ಲಾದ್‌ ಜೋಷಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಬಂಗಾರು ಹನುಮಂತು ವಿಜಯೇಂದ್ರ ಅವರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್‌ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್‌ ಪರಾಭವಗೊಂಡಿದ್ದರು. ಅವರನ್ನು ಮೀರಿಸಿ ಬಂಗಾರು ಟಿಕೆಟ್‌ ಪಡೆದಿದ್ದಾರೆ. 2006ರಿಂದ 2009ರವರೆಗೆ ಕೂಡ್ಲಿಗಿ ಮಂಡಲ ಯುವ ಮೋರ್ಚಾ ಅಧ್ಯಕ್ಷ, 2017ರಿಂದ 2019 ರವರೆಗೆ ಜಿಲ್ಲಾ ಕಾರ್ಯಕಾರಿ ಸದಸ್ಯ, 2020 ರಿಂದ 2022 ರವರೆಗೆ ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ.