ಬೆಂಗಳೂರು: ನ್ಯೂಜಿಲ್ಯಾಂಡ್(IND vs NZ) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ(Rohit Sharma), ಈ ಸೋಲಿನಿಂದ ಯಾರೂ ಗಾಬರಿಯಾಗಬೇಕಿಲ್ಲ, ಮುಂದಿನ ಪಂದ್ಯದಲ್ಲಿ ನಾವು ಗೆಲುವಿನ ಲಯಕ್ಕೆ ಮರಳುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, “ಒಟ್ಟಾರೆಯಾಗಿ, ಮೊದಲ ಮೂರು ಗಂಟೆಗಳನ್ನು ಹೊರತುಪಡಿಸಿ, ನಾವು ಉತ್ತಮ ಟೆಸ್ಟ್ ಕ್ರಿಕೆಟ್ ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಮೊದಲ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು ನಮ್ಮ ಪಾಲಿಗೆ ಮುಳುವಾಯಿತು. ಒಂದು ಪಂದ್ಯದ ಸೋಲಿನಿಂದ ತಂಡದ ಪ್ರದರ್ಶನವನ್ನು ಟೀಕಿಸುಔುದು ಸರಿಯಲ್ಲ. ಈ ಸೋಲು ನಮಗೆ ಪಾಠ ಇದ್ದಂತೆ. ಸೋಲಿನಿಂದ ತಂಡ ಹಲವು ಪಾಠ ಕಲಿತಿದೆ” ಎಂದು ರೋಹಿತ್ ಹೇಳಿದರು. ಮಳೆಯನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ನೆರದಿದ್ದ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೂ ರೋಹಿತ್ ಧನ್ಯವಾದ ತಿಳಿಸಿದರು.
ರಿಷಭ್ ಪಂತ್ ಗಾಯದ ಬಗ್ಗೆಯೂ ಮಾತನಾಡಿದ ರೋಹಿತ್, ʼಕಳೆದ ಒಂದೂವರೆ ವರ್ಷದಲ್ಲಿ ಪಂತ್ ಸಾಕಷ್ಟು ಆಘಾತವನ್ನು ಅನುಭವಿಸಿದ್ದಾರೆ. ಭಾರತ ತಂಡವೂ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ. ಹೀಗಾಗಿ ಅವರಿಗೆ ಪುಣೆ ಟೆಸ್ಟ್ಗೂ ಮುನ್ನ ಹೆಚ್ಚುವರಿ ವಿಶ್ರಾಂತಿ ಅಗತ್ಯ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮೊಣಕಾಲಿಗೆ ಮತ್ತೆ ಗಾಯಗೊಂಡಿರುವ ಕಾರಣ ನಾವು ಸ್ವಲ್ಪ ಜಾಗರೂಕರಾಗಿರಬೇಕುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ IND vs NZ: 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಗೆದ್ದ ನ್ಯೂಜಿಲೆಂಡ್; ರೋಹಿತ್ ಪಡೆಗೆ 8 ವಿಕೆಟ್ ಸೋಲು
ಆಸ್ಟ್ರೇಲಿಯಾ ವಿರುದ್ಧ ನಡೆಯುವ ವರ್ಷಾಂತ್ಯದ ಟೆಸ್ಟ್ ಸರಣಿ ಭಾರತದ ಪಾಲಿಗೆ ಮಹತ್ವವಾದ ಕಾರಣ ಪಂತ್ಗೆ ಕಿವೀಸ್ ವಿರುದ್ಧದ ಉಳಿದ 2 ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಪಂತ್ ಅಲಭ್ಯವಾದರೆ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ಗೆ ಅವಕಾಶ ಸಿಗಬಹುದು. ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೆ.ಎಲ್ ರಾಹುಲ್ ಅವರನ್ನು ಮುಂದಿನ ಟೆಸ್ಟ್ ಪಂದ್ಯಗಳಿಂದ ಕೈ ಬಿಟ್ಟು ಅವರ ಶುಭಮನ್ ಗಿಲ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ಅಧಿಕ. ಕತ್ತು ನೋವಿನ ಕಾರಣದಿಂದ ಗಿಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇವರ ಬದಲಿಗೆ ಆಡಿದ ಸರ್ಫರಾಜ್ ಶತಕ ಬಾರಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದರು. ಹೀಗಾಗಿ ಅವರನ್ನು ದ್ವಿತೀಯ ಟೆಸ್ಟ್ನಿಂದ ಕೈ ಬಿಡುವುದು ಅನುಮಾನ.