Tuesday, 19th November 2024

Human Sacrifice: ಶಾಕಿಂಗ್! ಅಜ್ಜಿಯನ್ನೇ ನರಬಲಿ ಕೊಟ್ಟು ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿದ ಪಾಪಿ ಮೊಮ್ಮಗ

human scarifies

ರಾಯ್ಪುರ: ನಾಗರೀಕತೆ ಎಷ್ಟೇ ಮುಂದುವರೆದರೂ ಜನರಲ್ಲಿ ಇನ್ನೂ ಮೂಢನಂಬಿಕೆಗಳು ಹಾಗೇ ಉಳಿದಿದೆ ಎಂಬುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅದಕ್ಕೆ ಸಾಕ್ಷಿ ಎಂಬಂತೆ ಛತ್ತೀಸ್‌ಗಡದಲ್ಲಿ ಘಟನೆಯೊಂದು ವರದಿಯಾಗಿದೆ. ದರ್ಗಾ ಜಿಲ್ಲೆಯಲ್ಲಿ ಪಾಪಿ ಮೊಮ್ಮಗನೊಬ್ಬ ಅಜ್ಜಿಯನ್ನೇ ಬಲಿ(Human Sacrifice)ಕೊಟ್ಟಂತಹ ಅಮಾನುಷ ಘಟನೆ ನಡೆದಿದೆ. ನಾನ್‌ಕಟ್ಟಿ ಗ್ರಾಮ ರುಕ್ಮಿಣಿ ಗೋಸ್ವಾಮಿ(70) ಮೊಮ್ಮಗನ ಕುಕೃತ್ಯಕ್ಕೆ ಬಲಿಯಾದ ದುರ್ದೈವಿ.

ನಂದಿನಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿ ಗುಲ್ಶನ್‌ ಗೋಸ್ವಾಮಿ(30) ತನ್ನ 70ವರ್ಷದ ಅಜ್ಜಿ ರುಕ್ಮಿಣಿ ಗೋಸ್ವಾಮಿಯವರನ್ನು ಬಲಿ ಕೊಟ್ಟು ಆಕೆಯ ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿದ್ದಾನೆ. ಸದ್ಯ ಗುಲ್ಶನ್‌ ಗೋಸ್ವಾಮಿ ಸ್ಥಿತಿ ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?

ಪೊಲೀಸರ ವರದಿ ಪ್ರಕಾರ, ಗುಲ್ಶನ್‌ ತನ್ನ ಅಜ್ಜಿ ರುಕ್ಷಿಣಿ ಜೊತೆ ಶಿವ ದೇವಾಲಯ ಸಮೀಪ ಇದ್ದ ಮನೆಯಲ್ಲಿ ವಾಸವಾಗಿದ್ದರು. ಆತನ ನಿತ್ಯವು ಶಿವನಿಗೆ ವಿವಿಧ ರೀತಿಯ ಪೂಜೆ ಪುನಸ್ಕಾರ ಮಾಡುತ್ತಿದ್ದರು. ತೀವ್ರ ಮೂಢ ನಂಬಿಕೆಯ ದಾಸನಾಗಿದ್ದ ಗುಲ್ಶನ್‌, ಶನಿವಾರ ಸಂಜೆ ರುಕ್ಮಿಣಿಯನ್ನು ಕತ್ತಿಯಿಂದ ಚುಚ್ಚಿ ಕೊಂದಿದ್ದಾನೆ. ನಂತರ ಆಕೆಯ ರಕ್ತವನ್ನು ತೆಗೆದು ಶಿವಲಿಂಗಕ್ಕೆ ಅರ್ಪಿಸಿದ್ದಾನೆ. ನಂತರ ಮನೆಗೆ ವಾಪಾಸ್‌ ಬಂದ ಆತ ಅದೇ ಕತ್ತಿಯಿಂದ ತನ್ನ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗುಲ್ಶನ್‌ನನ್ನು ಸ್ಥಳೀಯ ರಾಜ್ಯದ ರಾಜಧಾನಿ ರಾಯ್‌ಪುರದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌) ನಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಗುಲ್ಶನ್‌ ಯಾವ ಕಾರಣಕ್ಕಾಗಿ ಅಥವಾ ಈತನಿಗೆ ಪ್ರಚೋದನೆ ಕೊಟ್ಟವರು ಯಾರು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಮಲತಾಯಿಯೊಬ್ಬಳು ನಾಲ್ಕು ವರ್ಷದ ಮಗನನ್ನೇ ನರಬಲಿ (Human Sacrifice) ಕೊಟ್ಟಿರುವಂತಹ ಭೀಕರ ಸಂಗತಿಯೊಂಧು ಬೆಳಕಿಗೆ ಬಂದಿತ್ತು.

ಉತ್ತರ ಪ್ರದೇಶದ ಅಮೇಥಿಯಲ್ಲಿ ಮಹಿಳೆಯೊಬ್ಬರು ಮಾಂತ್ರಿಕನ ಜತೆಗೂಡಿ ನಾಲ್ಕು ವರ್ಷದ ಬಾಲಕನನ್ನು ನರಬಲಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾಲ್ಕು ವರ್ಷದ ಬಾಲಕ ಸತ್ಯೇಂದ್ರನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಆತನ ಕಿವಿ, ಕಣ್ಣು, ಎದೆ ಸೇರಿ ದೇಹದ ಹಲವು ಭಾಗದಲ್ಲಿ ಗಾಯಗಳಾಗಿದ್ದವು. ಮಲತಾಯಿಯೇ ಈತನನ್ನು ಕೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲತಾಯಿ ರೇಣು ಪ್ರಜಾಪತಿ (30) ಹಾಗೂ ದುರುಳ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದರು.

ರೇಶಿ ಗ್ರಾಮದ ನಿವಾಸಿಯಾದ ಜಿತೇಂದ್ರ ಪ್ರಜಾಪತಿಯ ಪತ್ನಿಯು ಮನೆಬಿಟ್ಟು ಹೋದ ಕಾರಣ ಒಂದೂವರೆ ವರ್ಷದ ಹಿಂದೆ ರೇಣು ಪ್ರಜಾಪತಿಯನ್ನು ಮದುವೆಯಾಗಿದ್ದರು. ರೇಣು ಪ್ರಜಾಪತಿಯು ಗರ್ಭ ಧರಿಸಿದರೂ ಹೆಚ್ಚಾಗಿ ಗರ್ಭಪಾತವಾಗುತ್ತಿತ್ತು. ಇದರಿಂದ ಬೇಸತ್ತ ಆಕೆ ಮಾಂತ್ರಿಕನ ಮೊರೆಹೋಗಿದ್ದರು. ನೀವು ಗರ್ಭ ಧರಿಸಲು ನಿಮ್ಮ ಮಲಮಗನನ್ನು ಬಲಿ ಕೊಡಬೇಕು ಎಂದು ಮಾಂತ್ರಿಕ ಹೇಳಿದ ಕಾರಣ, ಮಹಿಳೆ ಹಾಗೂ ಮಾಂತ್ರಿಕ ಸೇರಿ ಬಾಲಕನನ್ನು ಹತ್ಯೆ ಮಾಡಿದ್ದಳು.

ಈ ಸುದ್ದಿಯನ್ನೂ ಓದಿ: Road Accident: ಜವರಾಯನ ಅಟ್ಟಹಾಸ! ಬಸ್‌-ಟೆಂಪೋ ಡಿಕ್ಕಿ; ಎಂಟು ಮಕ್ಕಳು ಸೇರಿ 11 ಜನ ಬಲಿ