Sunday, 24th November 2024

Karnataka Tamilians : ಕಾವೇರಿ, ಮೇಕೆದಾಟು ವಿಚಾರದಲ್ಲಿ ಕರುನಾಡಿಗೆ ಬೆಂಬಲ; ಕರ್ನಾಟಕದ ತಮಿಳರ ನಿರ್ಧಾರ

ಬೆಂಗಳೂರು : ಕನ್ನಡಿಗರು ಮತ್ತು ತಮಿಳರು ದ್ರಾವಿಡ (Karnataka Tamilians) ಕುಲಕ್ಕೆ ಸೇರಿದವರು. ನಮ್ಮಲ್ಲಿ ಯಾವುದೇ ಭೇದ ಇಲ್ಲ ಎಂದು ಮಾಜಿ ಸಿಎಂ ಬಿ. ಎಸ್‌ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ನಡೆದ ಕನ್ನಡಿಗರು ಹಾಗೂ ಕರ್ನಾಟಕ ತಮಿಳರ ಸಾಂಸ್ಕೃತಿಕ ಮತ್ತು ಒಗ್ಗಟ್ಟಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

”ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರು ಮತ್ತು ಕನ್ನಡಿಗರ ನಡುವೆ ಸಾಮರಸ್ಯ ಮೂಡಿಸಲು ಯತ್ನಿಸಿದ್ದೆ. ಹಲಸೂರಿನಲ್ಲಿ ನನೆಗುದಿಗೆ ಬಿದ್ದಿದ್ದ ತಿರುವಳ್ಳವರ್‌ ಪ್ರತಿಮೆ ಯೋಜನೆ ಮುಗಿಸಿ ಎರಡೂ ಭಾಷಿಕರ ನಡುವೆ ಭಾತೃತ್ವ ಸೃಷ್ಟಿಸಿದ್ದೆ. ಆಗಿನ ಮುಖ್ಯಮಂತ್ರಿ ಕರುಣಾನಿಧಿ ಜತೆ ಮಾತನಾಡಿ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ನಿರ್ಮಿಸಲು ಕೋರಿದ್ದೆ,” ಎಂದು ಅವರು ಹೇಳಿದರು.

”ನಾನು ಸಿಎಂ ಆಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿ ಬಾರಿಯೂ ಕರ್ನಾಟಕದಲ್ಲಿರುವ ತಮಿಳರ ಏಳಿಗೆಗೆ ಪ್ರಯತ್ನಿಸಿದ್ದೆ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸಿದ್ದೆ. ಮುಂದೆಯೂ ಅದೇ ರೀತಿ ಇರಲು ಬಯಸುವೆ,” ಎಂದು ಹೇಳಿದರು.

”ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ ಕಾವೇರಿ ವಿಚಾರಕ್ಕೆ ಬಂದಾಗ ತಮಿಳರು ಮತ್ತು ಕನ್ನಡಿಗರ ನಡುವೆ ಅಂತರ ಸೃಷ್ಟಿಯಾಗಿರುವುದು ನಿಜ. ಉಳಿದಂತೆ ತಮಿಳುನಾಡು ಮತ್ತು ಕರ್ನಾಟಕ ನಡುವೆ ಉತ್ತಮ ಸಂಬಂಧ ಇರಬೇಕು ಎಂದು ಬಯಸುತ್ತೇನೆ,’ ಎಂದು ಹೇಳಿದರು.

”ನಾವೆಲ್ಲ ದಕ್ಷಿಣ ಭಾರತದವರು ಎಂಬುದು ಹೆಮ್ಮೆಯ ವಿಷಯ. ನಾವು ದ್ರಾವಿಡ ಕುಲಕ್ಕೆ ಸೇರಿದವರಾಗಿದ್ದು. ಜತೆಯಾಗಿಯೇ ಇರಬೇಕು. ಅಣ್ಣ- ತಮ್ಮಂದಿರಂತೆ ಬದುಕಬೇಕು. ಉತ್ತರ ಭಾರತೀಯರು ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುವುದನ್ನು ಜತೆಯಾಗಿಯೇ ಎದುರಿಸಬೇಕು,” ಎಂದು ಹೇಳಿದರು.

ತರೀಕೆರೆ ಶಾಸಕ ಶ್ರೀನಿವಾಸ್, ಕೊಡಗು ಶಾಸಕ ಮಂಥರ್‌ ಗೌಡ, , ಮಡಿಕೇರಿ ಶಾಸಕ ಎ ಎಸ್ ಪೊನ್ನಣ್ಣ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌, ರಾಜ್ಯಸಭಾ ಮಾಜಿ ಸದಸ್ಯ ಎಲ್ ಹನುಮಂತಯ್ಯ ಮತ್ತಿತರರು ಇದ್ದರು.

ಕವಿಗೋಷ್ಠಿ

ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌. ಜಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕನ್ನಡ ಕವಿಗೋಷ್ಠಿ ನಡೆದರೆ, ಬಾಬು ಶಶಿಧರನ್‌ ಅವರು ತಮಿಳು ಕವಿಗೋಷ್ಠಿ ನಡೆಸಿದರು. ಇದೇ ವೇಳೆ 20 ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

35 ನಿರ್ಧಾರಗಳ ಪ್ರಕಟ

ಕಾರ್ಯಕ್ರಮದಲ್ಲಿ ಒಟ್ಟು 35 ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಪ್ರಮುಖವಾಗಿ ಕರ್ನಾಟಕದ ಭಾಷೆ, ನೆಲ, ಜಲ, ಗಡಿ ಮತ್ತಿತರ ಕರ್ನಾಟಕದ ಹಕ್ಕುಗಳ ರಕ್ಷಿಸಿ ಕೊಳ್ಳುವುದಕ್ಕೆ ಕನ್ನಡಿಗರು ತೆಗೆದು ಕೊಳ್ಳುವ ಎಲ್ಲ ಪ್ರಯತ್ನಗಳಲ್ಲಿಯೂ ಕರ್ನಾಟಕದ ತಮಿಳರು ಕರ್ನಾಟಕ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ. ಕಾವೇರಿ ನೀರಿನ ಹಂಚಿಕೆ, ಮಹದಾಯಿ ನೀರಿನ ಹಂಚಿಕೆ, ಮೇಕೆದಾಟು ಅಣೆಕಟ್ಟು ಹಾಗೂ ಬೆಳಗಾವಿ ಗಡಿ ಸಮಸ್ಯೆ ಮುಂತಾದ ರಾಜ್ಯದ ಸಮಸ್ಯೆಗಳಲ್ಲಿ ಕರ್ನಾಟದ ಹಕ್ಕುಗಳ ಪರವಾಗಿ ತಮಿಳರು ಬೆಂಬಲ ನೀಡಲಿದ್ದಾರೆ.