Thursday, 24th October 2024

Bomb Threat: ಬೆಂಗಳೂರು, ಬೆಳಗಾವಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

Bomb Threat

ಬೆಂಗಳೂರು: ದೇಶದಾದ್ಯಂತ ವಿವಿಧ ವಿಮಾನ ನಿಲ್ದಾಣಗಳಿಗೆ ಹುಸಿ ಬಾಂಬ್‌ ಕರೆಗಳು ಬರುತ್ತಿರುವ ನಡುವೆ ಬೆಂಗಳೂರು ಮತ್ತು ಬೆಳಗಾವಿ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿದೆ. ಇದರಿಂದ ಈ ಎರಡು ಏರ್‌ಪೋರ್ಟ್‌ಗಳು ಸೇರಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್‌ ಸೆಂಟರ್‌ ಸ್ಫೋಟಿಸುವುದಾಗಿ ಸಂದೇಶ ಬಂದಿದ್ದು, ಇಂಡಿಗೋ ಸಂಸ್ಥೆಯ ಆರು ವಿಮಾನಗಳಲ್ಲಿ 12 ಬಾಂಬರ್‌ಗಳಿದ್ದಾರೆಂದು ಅನಾಮಧೇಯ ಟ್ವೀಟರ್‌ ಖಾತೆಯಿಂದ ಸಂದೇಶ ರವಾನಿಸಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ಸಂದೇಶದಲ್ಲಿ ಇಂಡಿಗೋ ಸಂಸ್ಥೆಯ IX233, IX 375, IX 481, IX 383, IX 549, IX 399 ಸೇರಿ ಆರು ವಿಮಾನಗಳಲ್ಲಿ ತಲಾ ಇಬ್ಬರು ಬಾಂಬರ್‌ಗಳು ಇರುವುದಾಗಿ ತಿಳಿಸಲಾಗಿದೆ. ಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿ ದೇಶದ ವಿವಿಧ ಏರ್‌ಪೋರ್ಟ್‌ಗಳಿಂದ‌ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳಿದ್ದಾರೆ ಎಂದು ಸಂದೇಶದಲ್ಲಿದೆ. ಆದರೆ, ಕೆಂಪೇಗೌಡ ಏರ್‌ಪೋರ್ಟ್‌ನಿಂದ ತೆರಳುವ ಯಾವುದೇ ವಿಮಾನ ಈ ಪಟ್ಟಿಯಲ್ಲಿಲ್ಲ ಎನ್ನಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಬೆಳಗಾವಿ ಏರ್‌ಪೋರ್ಟ್‌ಗೂ ಬೆದರಿಕೆ ಕರೆ

ಬೆಂಗಳೂರು ಏರ್‌ಪೋರ್ಟ್‌ ಜತೆಗೆ ಬೆಳಗಾವು ವಿಮಾನ ನಿಲ್ದಾಣಕ್ಕೂ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಇರುವ ಸಂದೇಶ ವಿಮಾನ ನಿಲ್ದಾಣದ‌ ನಿರ್ದೇಶಕ ತ್ಯಾಗರಾಜ್ ಅವರ ಇಮೇಲ್‌ಗೆ ರವಾನಿಸಲಾಗಿದೆ.

ಹೀಗಾಗಿ ತ್ಯಾಗರಾಜ್ ಅವರು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈನಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಾಂಬ್ ಬೆದರಿಕೆ ಪತ್ರದ ಬೆನ್ನಲ್ಲೇ ವಿಮಾನ ನಿಲ್ದಾಣಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಶ್ವಾನ ದಳ, ಬಾಂಬ್ ಸ್ಕ್ವಾಡ್‌ನಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ | Delhi Blast: CRPF ಶಾಲೆ ಬಳಿ ಭಾರೀ ಸ್ಫೋಟ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ; ಬೈಕ್‌ ಸವಾರ ಜಸ್ಟ್‌ ಮಿಸ್‌!

ಕಳೆದ ಸೋಮವಾರದಿಂದ ಇಲ್ಲಿಯವರೆಗೂ ಕನಿಷ್ಠ 70 ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆಗಳು ಬಂದಿವೆ. ಆದರೆ ಶನಿವಾರವೊಂದೇ ದೇಶದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಬಂದಿದೆ. ನಿರಂತರವಾಗಿ ಬಾಂಬ್‌ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ತೆಗೆದುಕೊಳ್ಳಲಾಗಿದ್ದು. ಹೈ ಅಲರ್ಟ್‌ ಘೋಷಿಸಲಾಗಿದೆ.