Tuesday, 19th November 2024

Byrathi Suresh: ಬಿಎಸ್‌ವೈ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ

Byrathi Suresh

ಬೆಂಗಳೂರು: ಮುಡಾ ಹಗರಣ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಬೈರತಿ ಸುರೇಶ್ ಬಂಧನವಾದರೆ ಹಗರಣದ ಸತ್ಯಾಂಶ ಬಯಲಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವೆ ವಿರುದ್ಧ ಸಚಿವ ಬೈರತಿ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದೆ. ಅವರ ಸಾವಿನ ಬಗ್ಗೆಯೂ ತನಿಖೆ ಆಗಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಸಚಿವೆ ಶೋಭಾ ಕರಂದ್ಲಾಜೆ ಅವರ ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರಿನ ಶಾಸಕ ಒಬ್ಬರಿದ್ದಾರೆ, ಮಾತ್ತೆತ್ತಿದರೆ ಸುಳ್ಳು. ಒಳಗಡೆ ಪೂಜೆ ಮಾಡಿಕೊಂಡು ಬಂದು ಹೊರಗಡೆ ಸುಳ್ಳು ಹೇಳಬಾರದು. ನಾನು ‌ ಈಗಲೂ ಸವಾಲು ಹಾಕ್ತೇನೆ. ಒಂದೇ ಒಂದು ಫೈಲ್ ಮಿಸ್ ಆಗಿದ್ದರೆ ನಾನು ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡ್ತೇನೆ. ಅವರೂ ಬೇಕಿದ್ದರೆ ಚಾಮುಂಡೇಶ್ವರಿಗೆ ಅಥವಾ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ | Jharkhand Assembly Election: ಸೀಟು ಹಂಚಿಕೆ ಬಗ್ಗೆ ಅಸಮಾಧಾನ; ಜಾರ್ಖಂಡ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಆರ್‌ಜೆಡಿ ನಿರ್ಧಾರ

ನಾನು ಸವಾಲು ಹಾಕಿ ಎರಡು ದಿನಗಳಾದರೂ ಶ್ರೀವತ್ಸ ಆಗ್ಲಿ ಬೇರೆಯವರಾಗಲಿ ಇದಕ್ಕೆ ಉತ್ತರ ಕೊಟ್ಟಿಲ್ಲ. ಪಾಪ ಶೋಭಾ ಕರಂದ್ಲಾಜೆಗೆ ಹೊಟ್ಟೆ ಉರಿ. ಇವರಿಗೆ ನನ್ನ ಕ್ಷೇತ್ರದಲ್ಲಿ ಲೀಡ್ ಬರಲಿಲ್ಲ ಎನ್ನೋ ಹೊಟ್ಟೆ ಉರಿ. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರ್ತಾರೆ ಅಂದರೆ, ನಾನು ಈಗಲೇ ಬರ್ತೇನೆ. ಹೆಲಿಕಾಪ್ಟರ್‌ನಲ್ಲಿ ಬರೋದಕ್ಕಾಗಲ್ಲ, ಗಾಡಿಯಲ್ಲಿ ಬರ್ತೇನೆ. ಶಾಸಕ ಶ್ರೀವತ್ಸ ಸುಳ್ಳು ಹೇಳುವುದು ಬಿಡಬೇಕು ಎಂದು ಕಿಡಿಕಾರಿದ್ದಾರೆ.