Wednesday, 23rd October 2024

IND vs NZ: ಸೋಲಿನ ಬೆನ್ನಲ್ಲೇ ತಂಡಕ್ಕೆ ಹೊಸ ಆಟಗಾರನ ಸೇರ್ಪಡೆಗೊಳಿಸಿದ ಬಿಸಿಸಿಐ

ಬೆಂಗಳೂರು: ನ್ಯೂಜಿಲ್ಯಾಂಡ್(IND vs NZ) ವಿರುದ್ಧದ ಮೊದಲ ಪಂದ್ಯ ಸೋತ ಬೆನ್ನಲ್ಲೇ ಭಾರತ ತಂಡ ಉಳಿದಿರುವ ಎರಡು ಟೆಸ್ಟ್‌ ಪಂದ್ಯಗಳಿಗೆ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಚೆನ್ನೈಯ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸರ್ಪಡೆಗೊಳಿಸಲಾಗಿದೆ. ವಾಷಿಂಗ್ಟನ್ ಸುಂದರ್(washington sundar) ಅವರು ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ಪುಣೆಯಲ್ಲಿ ತಂಡದೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ(BCCI) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ತಮಿಳುನಾಡು ಪರ 25 ರ ಹರೆಯದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 152 ರನ್ ಚಚ್ಚಿದ್ದರು. 2021 ರಲ್ಲಿ ಗಾಬಾದಲ್ಲಿ ಆಸ್ಟ್ರೇಲಿಯ ವಿರುದ್ಧದ ಭಾರತದ ಐತಿಹಾಸಿಕ ಗೆಲುವಿನಲ್ಲಿಯೂ ವಾಷಿಂಗ್ಟನ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆ ಪಂದ್ಯವು ಅವರ ಟೆಸ್ಟ್ ಚೊಚ್ಚಲ ಪಂದ್ಯವಾಗಿತ್ತು. ನಾಲ್ಕು ಟೆಸ್ಟ್, 22 ಏಕದಿನ ಮತ್ತು 52 ಟಿ 20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ವಾಷಿಂಗ್ಟನ್ ಸುಂದರ್ ಹೊಂದಿದ್ದಾರೆ. ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಹೊರಗಿಟ್ಟು ಅವರ ಸ್ಥಾನಕ್ಕೆ ಸುಂದರ್‌ ಅವರನ್ನು ಆಡಿಸಿದರೂ ಅಚ್ಚರಿಯಿಲ್ಲ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ ಪುಣೆಯಲ್ಲಿ ಆರಂಭವಾಗಲಿದೆ.

ಮೊಣಕಾಲು ಗಾಯದ ಮಧ್ಯೆಯೂ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ನಡೆಸಿ 99 ರನ್‌ ಬಾರಿಸಿ ತಂಡಕ್ಕೆ ನೆರವಾಗಿದ್ದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನ. ಈಗಾಗಲೇ ನಾಯಕ ರೋಹಿತ್‌ ಅವರು ಪಂತ್‌ಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಅವರ ಗಾಯದ ಬಗ್ಗೆ ತಂಡ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ. ಪಂತ್‌ ಅಲಭ್ಯರಾದರೆ ಧ್ರುವ್‌ ಜುರೇಲ್‌ಗೆ ಅವಕಾಶ ಸಿಗಬಹುದು. ಕತ್ತು ನೋವಿನಿಂದ ಮೊದಲ ಪಂದ್ಯ ಆಡದ ಶುಭಮನ್‌ ಗಿಲ್‌ ಸಂಪೂರ್ಣ ಫಿಟ್‌ ಆಗಿದ್ದು ಪುಣೆ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರಿಗಾಗಿ ಕಳಪೆ ಫಾರ್ಮ್‌ನಲ್ಲಿರುವ ಕೆ.ಎಲ್‌ ರಾಹುಲ್‌ ಸ್ಥಾನ ಬಿಡಬೇಕಾದೀತು.

ಇದನ್ನೂ ಓದಿ IND vs NZ: ಮೂರು ಗಂಟೆ ಹೊರತುಪಡಿಸಿ ನಾವು ಉತ್ತಮ ಟೆಸ್ಟ್ ಆಡಿದ್ದೇವೆ; ರೋಹಿತ್‌ ಪ್ರತಿಕ್ರಿಯೆ

ಎರಡನೇ ಮತ್ತು ಮೂರನೇ ಟೆಸ್ಟ್‌ ಭಾರತ ತಂಡ

ರೋಹಿತ್ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್‌ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್.