ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಸಂಜೀವ್ ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಪ್ರೀತಿಪಾತ್ರರು ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸೇರಿದಂತೆ ಗಣ್ಯರು ಭೇಟಿ ನೀಡಿ ಸುದೀಪ್ ತಾಯಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು
ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರ ತೋಳಿನಲ್ಲಿ ತಲೆಯಿಟ್ಟು ಕಿಚ್ಚ ಸುದೀಪ್ ಅವರು ಮಗುವಿಂತೆ ಬಿಕ್ಕಳಿಸಿ ಅತ್ತ ದೃಶ್ಯ ಕಂಡುಬಂತು. ಬೊಮ್ಮಾಯಿ ಅವರನ್ನು ಸಂತೈಸಿದರು. ಬಸವರಾಜ ಬೊಮ್ಮಾಯಿ ಅವರು ಕಿಚ್ಚು ಸುದೀಪ್ ಕುಟುಂಬಕ್ಕೆ ಅಪ್ತರಾಗಿದ್ದು, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿ ಪರ ಸುದೀಪ್ ಅವರು ಪ್ರಚಾರವನ್ನೂ ಮಾಡಿದ್ದರು.
ಅಮ್ಮನ ಸಾವಿನ ನಂತರ ತಮ್ಮನ್ನು ಭೇಟಿಯಾಗಲು ಬಂದಿದ್ದವರನ್ನು ಭೇಟಿ ಮಾಡುವ ವೇಳೆ ಸುದೀಪ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಸುದೀಪ್ ಅವರ ತಂದೆ, ಸಂಜೀವ್ ಸರೋವರ್ ಅವರಿಗೆ ಬೊಮ್ಮಾಯಿ ನಿಕಟರಾಗಿದ್ದರು.
ಸುದೀಪ್ ಅವರ ತಾಯಿಯ ಸಾವಿನ ಸುದ್ದಿ ಹೊರಬಿದ್ದ ನಂತರ ಬಸವರಾಜ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು: “ನಟ ಸುದೀಪ್ ಅವರ ತಾಯಿ ಸರೋಜಾ ಅವರ ಅಗಲಿಕೆ ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ. ಅವರು ತಾಯಿ ವಾತ್ಸಲ್ಯದ ಪ್ರತಿರೂಪವಾಗಿದ್ದರು. ಬಂದವರನ್ನು ಯಾವಾಗಲೂ ಸ್ವಾಗತಿಸುತ್ತಿದ್ದರು. ನಾವು ಭೇಟಿ ನೀಡಿದಾಗಲೆಲ್ಲ ಅತಿಥಿಗಳನ್ನು ಪ್ರೀತಿಯಿಂದ ಉಪಚರಿಸುತ್ತಿದ್ದ ಅವರು ನಿಜವಾಗಿಯೂ ಅನ್ನಪೂರ್ಣೇಶ್ವರಿಯಂತಿದ್ದರು” ಎಂದು ಹೇಳಿದ್ದಾರೆ.
ಇಂದು ನಿಧನರಾದ ನಟ ಸುದೀಪ್ ಅವರ ತಾಯಿಯವರ ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆನು. @KicchaSudeep pic.twitter.com/QgEmg5LiNr
— Basavaraj S Bommai (@BSBommai) October 20, 2024
ಸುದೀಪ್ ಅವರಿಗೆ ಗಣ್ಯರಿಂದ ಸಾಂತ್ವನ ಹರಿದುಬಂದಿದೆ. ನಟ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂತಾಪ ಸೂಚಿಸುವ ಪೋಸ್ಟ್ ಮಾಡಿದ್ದಾರೆ. ನಟ ಶಿವ ರಾಜ್ಕುಮಾರ್ ಅವರು ಸುದೀಪ್ ಅವರನ್ನು ಭೇಟಿಯಾಗಿ ಸಂತಾಪ ಸೂಚಿಸಿದ್ದಾರೆ. ರಿಷಬ್ ಶೆಟ್ಟಿ ಎಕ್ಸ್ನಲ್ಲಿ “ನಿಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡಿರುವ @KicchaSudeep ಸರ್, ನಿಮಗೆ ನನ್ನ ಆಳವಾದ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಕ್ತಿ ಸಿಗಲಿ” ಎಂದಿದ್ದಾರೆ.
ವಯೋಸಹಜ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಸರೋಜಾ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಕೆಯ ಪಾರ್ಥಿವ ಶರೀರವನ್ನು ಜೆ.ಪಿ.ನಗರದ ಮನೆಯಲ್ಲಿ ಇರಿಸಿ ಅಂತಿಮ ದರ್ಶನ ನಡೆಸಲಾಯಿತು.
ಇದನ್ನೂ ಓದಿ: Pawan Kalyan: ಸುದೀಪ್ ತಾಯಿ ನಿಧನಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಂತಾಪ; ಕನ್ನಡದಲ್ಲೇ ಪತ್ರ