Wednesday, 23rd October 2024

Shivraj Singh Chouhan : ಮೋದಿ ಘೋಷಣೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ

Shivraj Singh Chouhan

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿವರು ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ತುರ್ತು ಅನುಷ್ಠಾನ ಮಾಡಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಈ ತಂಡವು ಯೋಜನೆ ಮತ್ತು ಕೇಂದ್ರ ಬಜೆಟ್, ಅಧೀನ ಕಾನೂನು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಿದೆ.

ಮೇಲ್ವಿಚಾರಣಾ ಸಮಿತಿಯ ಉದ್ಘಾಟನಾ ಸಭೆಯು ಅಕ್ಟೋಬರ್ 18 ರಂದು ಪ್ರಧಾನ ಮಂತ್ರಿ ಕಚೇರಿಯಲ್ಲಿ (PMO) ನಡೆಯಿತು. ರೈಲ್ವೇ ಮಂಡಳಿಯ ಅಧ್ಯಕ್ಷರು ಸೇರಿದಂತೆ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಕೆಲವರು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದರು. ಸಮಿತಿಯು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಕಚೇರಿಯಲ್ಲಿ ಇನ್ನು ಮುಂದೆ ಮಾಸಿಕ ಸಭೆ ನಡೆಸಲಿದೆ.

ಮೇಲ್ವಿಚಾರಣಾ ತಂಡದ ಉದ್ದೇಶಗಳು

ಪ್ರಕಟಣೆಗಳ ಪರಿಶೀಲನೆ : ಪ್ರಧಾನ ಮಂತ್ರಿಗಳ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಪ್ರಕಟಣೆಗಳನ್ನು ಈ ತಂಡ ಪರಿಶೀಲಿಸುತ್ತದೆ.
ಪ್ರಾಜೆಕ್ಟ್ ಮಾನಿಟರಿಂಗ್ : ಮೋದಿಯವರು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಮೌಲ್ಯಮಾಪನ.
ಬಜೆಟ್ ವಿಶ್ಲೇಷಣೆ : ಕೇಂದ್ರ ಬಜೆಟ್‌ನಲ್ಲಿ ಮಾಡಿದ ಘೋಷಣೆಗಳ ಮೌಲ್ಯಮಾಪನ ಮಾಡುವುದು.
ಮೂಲಸೌಕರ್ಯ ಮೇಲ್ವಿಚಾರಣೆ : ಮಹತ್ವದ ಮೂಲಸೌಕರ್ಯ ಯೋಜನೆಗಳು ಈ ತಂಡದ ವ್ಯಾಪ್ತಿಯಲ್ಲಿರುತ್ತವೆ.

ಈ ಜವಾಬ್ದಾರಿಗಳ ಜೊತೆಗೆ, ಚೌಹಾಣ್ ಯಾವುದೇ ಯೋಜನೆಯು ಮಂದಗತಿಯಲ್ಲಿ ಕಂಡುಬಂದರೆ ಅಥವಾ ಬೇರೆ ಸಚಿವಾಲಯದ ಬೆಂಬಲದ ಅಗತ್ಯವಿದ್ದರೆ ಅದನ್ನೂ ನಿರ್ವಹಿಸಬೇಕು. 2014ರಲ್ಲಿ ಮೊದಲ ಎನ್‌ಡಿಎ ಸರ್ಕಾರ ರಚನೆಯಾದಾಗಿನಿಂದ ಘೋಷಿತ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರಧಾನಿ ಮೋದಿ ಚೌಹಾಣ್‌ಗೆ ಅಧಿಕಾರವನ್ನು ವಹಿಸಿದ್ದಾರೆ.

ಇದನ್ನೂ ಓದಿ: Pralhad Joshi: ದೇಶದ 48 ಕ್ಷೇತ್ರಗಳ ಬಿಜೆಪಿ ಪಟ್ಟಿ ಒಟ್ಟಿಗೇ ಪ್ರಕಟ ಸಾಧ್ಯತೆ: ಪ್ರಲ್ಹಾದ್‌ ಜೋಶಿ

ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ, ಕಾರ್ಯದರ್ಶಿಗಳು ಮತ್ತು ಹಿರಿಯ ಪಿಎಂಒ ಅಧಿಕಾರಿಗಳೊಂದಿಗೆ ನಡೆದ ಸಭೆಗಳಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದಷ್ಟು ಬೇಗ ಮಂದಗತಿಯಲ್ಲಿರುವ ಯೋಜನೆಗಳ ಬಗ್ಗೆ ಗಮನ ಹರಿಸಿ ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದಾರೆ.

ಇತ್ತೀಚಿಗೆ ವಾರಣಾಸಿಯ ಪುನರಾಭಿವೃದ್ಧಿ ಸಿಗ್ರಾ ಕ್ರೀಡಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಸ್ವಜನ ಪಕ್ಷಪಾತ ಮತ್ತು ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದರು. ರಾಜಕೀಯದಲ್ಲಿ ಬದಲಾವಣೆ ತರಲು ಯಾವುದೇ ಕುಟುಂಬ ರಾಜಕಾರಣ ಮಾಡದೇ ದೇಶದ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ತರುವುದಾಗಿ ಹೇಳಿದ್ದಾರೆ. ಹೊಸ ರಾಜಕೀಯ ಆಂದೋಲನಕ್ಕೆ ಸೇರಲು ನಾನು ಉತ್ತರ ಪ್ರದೇಶ ಮತ್ತು ದೇಶದ ಯುವಕರನ್ನು ಒತ್ತಾಯಿಸುತ್ತೇನೆ. ಕಾಶಿ ಸಂಸದನಾಗಿ ಸಾಧ್ಯವಾದಷ್ಟು ಯುವಕರನ್ನು ಮುಂದೆ ತರಲು ಬದ್ಧನಾಗಿದ್ದೇನೆ ಎಂದರು.