Friday, 22nd November 2024

Bangalore Rain : ಬೆಂಗಳೂರಿನಲ್ಲಿ ಮುಂಜಾನೆ ಅಬ್ಬರದ ಮಳೆ; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Bangalore News

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಜೋರು ಮಳೆ ಸುರಿಯಿತು. (Bangalore Rain) ಭಾನುವಾರ ರಾತ್ರಿ ಸುರಿದ ಮಳೆ ಸ್ವಲ್ಪ ಬಿಡುವು ಪಡೆದುಕೊಂಡು ಬಳಿಕ ಬೆಳಗ್ಗಿನ ವೇಳೆ ಅಬ್ಬರಿಸಿತು. ಗುಡುಗು ಮಳೆಯ ಆರ್ಭಟದಿಂದಾಗಿ ವಾರದ ಆರಂಭದಲ್ಲಿ ಕಚೇರಿ ಕೆಲಸಗಳಿಗೆ ಹೊರಟ್ಟಿದ್ದ ಮಂದಿ ಸಮಸ್ಯೆ ಎದುರಿಸಿದರು. ಮಳೆಯಿಂದ ನಗರದ ಹಲವಡೆ ಅವಾಂತರ ಸೃಷ್ಟಿಯಾಯಿತು. ರಸ್ತೆಗಳಲ್ಲಿ ನೀರು ನಿಂತಿದ್ದು ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಗರದ ಹಲವು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ ಉಂಟಾಯಿತು.

ಮಳೆಯಿಂದಾಗಿ ಬೆಂಗಳೂರಿನ ಹಲವಾರು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿತು. ಹೀಗಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಎಲ್ಲ ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ದಿನ ನಿತ್ಯದ ಕೆಲಸ ಕಾರ್ಯಕ್ಕೆ ಹೊರಡಲು ಜನ ಹರಸಾಹಸ ಪಟ್ಟರು. ಡಬಲ್ ರೋಡ್ ರಸ್ತೆಯಲ್ಲಿ ನೀರು ತುಂಬಿಕೊಂಡ ಕಾರಣ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು.

ಎಲ್ಲೆಲ್ಲಿ ಮಳೆ?

ಮೆಜೆಸ್ಟಿಕ್​, ಮೈಸೂರು ಬ್ಯಾಂಕ್​ ಸರ್ಕಲ್​, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆ.ಆರ್​.ಮಾರ್ಕೆಟ್​, ಟೌನ್​ಹಾಲ್​, ಕಾರ್ಪೊರೇಷನ್​​ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆ.ಆರ್​.ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್​ ಬೋರ್ಡ್​,  ಕೆಂಗೇರಿ, ನಾಗರಬಾವಿ, ಆರ್​ಆರ್​​ ನಗರ ಮತ್ತಿತರ ಕಡೆ ಜೋರು ಮಳೆ ಸುರಿಯಿತು.

ಟ್ರಾಫಿಕ್ ಜಾಮ್

ಮಳೆ ಬಂದ ತಕ್ಷಣ ಮುಳುಗುವ ಮೆಜೆಸ್ಟಿಕ್ ಬಳಿಯ ಓಕಳಿಪುರಂ ಅಂಡರ್​ಪಾಸ್‌ನಲ್ಲಿ ಮತ್ತೆ ನೀರು ತುಂಬಿಕೊಂಡಿತ್ತು. ಪ್ರತಿಬಾರಿಯೂ ಇಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಂತೆಯೇ ಸೋಮವಾರ ಮುಂಜಾನೆಯೂ ಉಂಟಾಯಿತು. ಹೀಗಾಗಿ ಹೊರ ಊರುಗಳಿಂದ ಮೆಜೆಸ್ಟಿಕ್‌ ಕಡೆಗೆ ಬರುತ್ತಿದ್ದ ಜನರು ಪರದಾಡಿದರು. ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲೂ ಟ್ರಾಫಿಕ್ ಜಾಮ್ ಉಂಟಾಯಿತು. ಕೆಂಗೇರಿ ರೈಲ್ವೆ ನಿಲ್ದಾಣದಲ್ಲೂ ಮಳೆ ಉಂಟಾಯಿತು.

ದಾಖಲೆಯ ಮಳೆ

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ದಾಖಲೆಯ 17.7 ಮಿಲಿ ಮೀಟರ್ ಮಳೆಯಾಗಿದೆ. ಹೆಚ್​ಎಎಲ್ ಏರ್​​ಪೋರ್ಟ್​ ವ್ಯಾಪ್ತಿಯಲ್ಲಿ 10.8 ಮಿಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಮಿಮೀ, ಬಾಗಲಗುಂಟೆ 5.4 ಮಿಮೀ, ಶೆಟ್ಟಿಹಳ್ಳಿ 4.2 ಮಿಮೀ, ನಂದಿನಿ ಲೇಔಟ್ 3.3 ಮಿಮೀ, ಹೇರೋಹಳ್ಳಿ 2.9 ಮಿಮೀ, ಕೆಂಗೇರಿ ವ್ಯಾಪ್ತಿಯಲ್ಲಿ 2.1 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಮನೆಗೆ ನುಗ್ಗಿದ ನೀರು

ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ ಭಾರಿ ಮಳೆಗೆ ರಾಜಕಾಲುವೆ ನೀರು ಉಕ್ಕಿ ಹರಿದಿದೆ. ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದಾರೆ.

ಮರಬಿದ್ದು ಕಾರು ಜಖಂ

ಮಲ್ಲೇಶ್ವರದಲ್ಲಿ ಭಾನುವಾರ ರಾತ್ರಿ ರೈಲ್ವೆ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದು ಆಲ್ಟೊ ಕಾರಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಅದೇ ರೀತಿ ತೋಟಗೆರೆ ಗ್ರಾಮದ ಬಳಿ ರಸ್ತೆ ಮಧ್ಯವೇ ಭಾರಿ ಮರ ಬಿದ್ದು ಹೋಯಿತು. ಹೆಸರಘಟ್ಟ-ಗೊಲ್ಲಹಳ್ಳಿ ಮಾರ್ಗಮಧ್ಯೆ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.