Friday, 22nd November 2024

BY Vijayendra: ಅಸಭ್ಯ, ಸಂಸ್ಕೃತಿಹೀನ: ತಾಯಿ ಸಾವಿನ ಬಗ್ಗೆ ಮಾತನಾಡಿದ ಬೈರತಿ ಸುರೇಶ್‌ಗೆ ಬಿವೈ ವಿಜಯೇಂದ್ರ, ರಾಘವೇಂದ್ರ ಕಿಡಿ

BJP Karnataka

ಬೆಂಗಳೂರು: ತೀವ್ರ ಹತಾಶಗೊಂಡಿರುವ ಬೈರತಿ ಸುರೇಶ್‌ (Byrati Suresh) ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ಅವರ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರ ಪತ್ನಿಯ ಸಾವಿನಲ್ಲಿ ಶೋಭಾ ಕರಂದ್ಲಾಜೆ (Shobha Karandlaje) ಅವರ ಕೈವಾಡ ಇದೆ ಎಂಬ ಬೈರತಿ ಸುರೇಶ್‌ ಮಾತಿಗೆ ಅವರು ಎಕ್ಸ್‌ ಪೋಸ್ಟ್‌ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಹಾಗೂ ನಿಮ್ಮ ಮುಖ್ಯಮಂತ್ರಿಗೇ ಸಲ್ಲುತ್ತದೆ.”

”ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮ ಕೊರಳು ಸುತ್ತಿ ಕೊಳ್ಳುತ್ತಿವೆ ಇದರಿಂದ ತೀವ್ರ ಹತಾಶಗೊಂಡಿರುವ ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ.”

”ಮಾನ್ಯ ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲಾಗದ ನೀವು ಹೇಡಿಯಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ವಿಷಯಾಂತರ ಮಾಡಲು ಹೊರಟಿರುವ ನಿಮ್ಮ ನಡೆ “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣವ ಬಿಡು ನಾಲಿಗೆ” ಎಂಬ ದಾಸರ ಪದವನ್ನು ನಿಮಗೆ ನೆನಪಿಸಿ ಹೇಳಬೇಕಾಗಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಅತೀ ಶೀಘ್ರದಲ್ಲೇ ನಿಮ್ಮ ಹಾದಿ ಕೃಷ್ಣನ ಜನ್ಮಸ್ಥಾನದತ್ತ ಸಾಗಲಿದೆ.” ಎಂದಿದ್ದಾರೆ.

ಎಲುಬಿಲ್ಲದ ನಾಲಿಗೆ: ಬಿವೈ ರಾಘವೇಂದ್ರ

ನಮ್ಮ ತಾಯಿ ಮೈತ್ರಾ ದೇವಿ ಅವರದು ಸಹಜ ಸಾವು. ಅವರ ಸಾವಿನ ಕುರಿತು ಮಾತನಾಡಿ ಸಚಿವ ಭೈರತಿ ಸುರೇಶ್ ಅವರು ತಮ್ಮದು ಆಚಾರ ವಿಲ್ಲದ ನಾಲಿಗೆ ಎಂದು ಸಾಬೀತು ಪಡಿಸಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಟೀಕಿಸಿದ್ದಾರೆ.

“ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಿಮ್ಮ ಭ್ರಷ್ಟ ನಾಯಕರನ್ನು ಉಳಿಸಿಕೊಳ್ಳಲು, ಪ್ರಕರಣದ ದಿಕ್ಕನ್ನು ಬೇರೆ ಕಡೆ ತಿರುಗಿಸಲು ನನ್ನ ಪೂಜ್ಯ ತಾಯಿಯವರ ಸಹಜ ಸಾವನ್ನು ಆಚಾರವಿಲ್ಲದ, ತಮ್ಮ ಎಲುಬಿಲ್ಲದ ನಾಲಿಗೆಯ ಮೂಲಕ ಕಾಂಗ್ರೆಸ್​ ಪಕ್ಷದ ಮೂಲ ರಾಜಕೀಯ ಸಂಸ್ಕೃತಿಯಾದ ಲಜ್ಜೆಗೆಟ್ಟ ರಾಜಕಾರಣಕ್ಕೆ ಬಳಸಿಕೊಂಡಿರುವುದು ಆಕ್ಷೇಪಾರ್ಹ” ಎಂದಿದ್ದಾರೆ.

“ಇದು ಅವರ ಸ್ಮರಣೆಗೆ ಮಾತ್ರವಲ್ಲ, ಮಾನವೀಯತೆಯ ಮೂಲ ಮೌಲ್ಯಗಳಿಗೂ ಧಕ್ಕೆ ತರುವಂತಹ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ವೈಯಕ್ತಿಕ ನೋವನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸುವುದು ಜನತೆಗೂ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಕಪ್ಪುಚುಕ್ಕೆ ಇಟ್ಟಂತೆಯೇ ಸರಿ. ಈ ರೀತಿಯ ನೀಚ ರಾಜಕಾರಣವನ್ನು ಯಾರು ಕೂಡ ಮಾಡಬಾರದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಅಳವಡಿಸಿಕೊಳ್ಳಬಾರದು. ಇದು ನಿಮಗೆ ಖಂಡಿತಾ ಶೋಭೆ ತರುವುದಿಲ್ಲ. ಇಂತಹ ಲಜ್ಜಾಸ್ಪದ ರಾಜಕೀಯದ ಮುಖವಾಡಗಳನ್ನು ನಾನು ಧಿಕ್ಕರಿಸುತ್ತೇನೆ. ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಈ ಮೂಲಕ ತಮಗೆ ನೀಡುತ್ತಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Byrathi Suresh: ಬಿಎಸ್‌ವೈ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ