Saturday, 23rd November 2024

Blood Pressure Medicine : ದಿನಕ್ಕೆ ನಾಲ್ಕೈದು ಬಿಪಿ ಮಾತ್ರೆಗೆ ಹೇಳಿ ಟಾಟಾ; ಎಲ್ಲದಕ್ಕೂ ಇನ್ನು ಒಂದೇ ಗುಳಿಗೆ!

Health tips

ನವದೆಹಲಿ: ಆರೋಗ್ಯ ಮನುಷ್ಯನಿಗೆ ಅತೀ ಅವಶ್ಯಕ. ಅದರಲ್ಲೂ ಇಂದಿನ ಒತ್ತಡದ(Stress) ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ. ವಿಧ ವಿಧವಾದ ಮಾತ್ರೆಯನ್ನು(Blood Pressure Medicine) ತೆಗೆದುಕೊಂಡು ಬೇಸತ್ತ ಜನರಿಗೆ ಇದೀಗ ಖುಷಿ ಸುದ್ದಿ ಸಿಕ್ಕಿದೆ . ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವುವರು ಹೆಚ್ಚಿನ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಜನರ ಮೇಲೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತವೆ. ಆದರೆ ಇದೀಗ ಹೊಸದಾಗಿ ಹೊಸ 3ಇನ್1 ಮಾತ್ರೆಗಳ ಬಗ್ಗೆ ಆವಿಷ್ಕಾರ ನಡೆದಿದ್ದು, GMRx2 ಎಂದು ಕರೆಯಲ್ಪಡುವ ಗುಳಿಗೆ ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್ ಎಂಬ ಮೂರು ಅಂಶಗಳನ್ನು ಹೊಂದಿದೆ.

ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, “ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್‌ನ ಗುಳಿಗೆಯು ಎರಡೆರಡು ಮಾತ್ರೆಗಳಿಗೆ ಹೋಲಿಸಿದರೆ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೇಳಿದೆ.

ಅಧ್ಯಯನ ಏನು ಹೇಳುತ್ತದೆ?

ಈ ಮಾತ್ರೆಯ ಕುರಿತ ಪ್ರಯೋಗವನ್ನು ಜುಲೈ 9, 2021 ರಿಂದ ಸೆಪ್ಟೆಂಬರ್ 1, 2023 ರ ವರೆಗೆ ನಡೆಸಲಾಗಿದೆ. ಒಟ್ಟು 1,385 ಜನರನ್ನು ಆಯ್ಕೆ ಮಾಡಿಕೊಂಡು ನಾಲ್ಕು ಗುಂಪುಗಳಾಗಿ ಮಾಡಲಾಗಿತ್ತು. 551 ಮಂದಿಗೆ GMRx2, 276 ಜನರಿಗೆ ಟೆಲ್ಮಿಸಾರ್ಟನ್-ಇಂಡಪಮೈಡ್ 282 ಮಂದಿಗೆ ಟೆಲ್ಮಿಸಾರ್ಟನ್ ಮತ್ತು 278 ಮಂದಿಗೆ ಅಮ್ಲೋಡಿಪೈನ್ ಮಾತ್ರೆ ನೀಡಲಾಗಿತ್ರು. ಪ್ರಯೋಗದಲ್ಲಿ ಭಾಗವಹಿಸಿದವರ ಸರಾಸರಿ ವಯಸ್ಸು 59 ವರ್ಷ ಮತ್ತು 712 (ಶೇ. 51) ಮಹಿಳೆಯರು ಮತ್ತು 673 (ಶೇ. 48.6) ಪುರುಷರಿದ್ದರು. ತಪಾಸಣೆ ವೇಳೆಯಲ್ಲಿಅವರ ರಕ್ತದೊತ್ತಡವು 142/85 ರಷ್ಟಿತ್ತು. ಅಧ್ಯಯನದ ಕೊನೆಯಲ್ಲಿ ಪ್ರತ್ಯೇಕ ಮೂರು ಮಾತ್ರೆಗಳಿಗಿಂತ ಒಂದೇ ಮಾತ್ರೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿತು.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಅಂದಾಜು 22 ಕೋಟಿ. ಅವರಲ್ಲಿ ಕೇವಲ 12 ಪ್ರತಿಶತದಷ್ಟು ಜನರು ಮಾತ್ರ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.ಹೀಗಾಗಿ 3-ಇನ್-1 ಮಾತ್ರೆಗಳು ಉಪಯೋಗಕಾರಿಯಾಗಿದೆ. ಮಾತ್ರೆಗಳ ಖರೀದಿಯ ಆರ್ಥಿಕ ಹೊರೆ ಇಳಿಯಲಿದೆ. ಅಧಿಕ ರಕ್ತದೊತ್ತಡವು ಇತರ ರೋಗಗಳಿಂತ ಹೆಚ್ಚು ಸಾವಿಗೆ ಕಾರಣವಾಗುತ್ತಿವೆ.