Friday, 22nd November 2024

Cheteshwar Pujara: ಚಂಢೀಗಡ ವಿರುದ್ಧ ಶತಕ ಬಾರಿಸಿ ಹಲವು ದಾಖಲೆ ಬರೆದ ಚೇತೇಶ್ವರ್ ಪೂಜಾರ

ಮುಂಬಯಿ: ಟೀಮ್​ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಅವರು ಸದ್ಯ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಚಂಢೀಗಡ(Saurashtra vs Chhattisgarh) ವಿರುದ್ಧದ ರಣಜಿ(Ranji Trophy) ಪಂದ್ಯದಲ್ಲಿ ಸೌರಾಷ್ಟ್ರ ಪರ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ.

ಈ ಶತಕದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ ತಮ್ಮ ಶತಕದ ಸಂಖ್ಯೆಯನ್ನು 66ಕ್ಕೇ ಏರಿಸಿದರು. ಭಾರತ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌ ಮತ್ತು ಸುನೀಲ್‌ ಗವಾಸ್ಕರ್‌ ಹೆಸರಿನಲ್ಲಿದೆ. ಉಭಯ ಆಟಗಾರರು 81 ಶತಕ ಬಾರಿಸಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ರಾಹುಲ್‌ ದ್ರಾವಿಡ್‌(68)ಗೆ ದ್ವಿತೀಯ ಸ್ಥಾನ. ಮೂರನೇ ಸ್ಥಾನದಲ್ಲಿರುವ ಪೂಜಾರ(66) ಈ ಆವೃತ್ತಿಯ ರಣಜಿಯಲ್ಲಿ ಇನ್ನು ಮೂರು ಶತಕ ಬಾರಿಸಿದರೆ ದ್ರಾವಿಡ್‌ ದಾಖಲೆ ಮುರಿಯಬಹುದು.

ರಣಜಿ ಟೂರ್ನಿಯಲ್ಲಿ ಇದು ಪೂಜಾರ ಅವರ 25ನೇ ಶತಕ. ಇದೇ ವೇಳೆ ಗವಾಸ್ಕರ್, ತೆಂಡೂಲ್ಕರ್ ಮತ್ತು ದ್ರಾವಿಡ್ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21 ಸಾವಿರ ರನ್‌ ಪೂರೈಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.

ರಾಷ್ಟ್ರೀಯ ತಂಡದ ಪರ ರನ್‌ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಪೂಜಾರ ಅವರು ಟೀಮ್​ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದರೆ, ದೇಶೀಯ ಕ್ರಿಕೆಟ್​ನಲ್ಲಿ ಪೂಜಾರ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದು ಮತ್ತೆ ಭಾರತ ತಂಡದ ಪರ ಆಡಲು ಶ್ರಮವಹಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿಯೂ ಪೂಜಾರ ಇದೇ ಪ್ರದರ್ಶನ ತೋರಿದರೆ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಆಯ್ಕೆಯಾಗಬಹುದು.

ಇದನ್ನೂ ಓದಿ IND vs NZ 2nd Test: ಕಿವೀಸ್‌ ಟೆಸ್ಟ್‌ನಿಂದ ರಿಷಭ್‌ ಪಂತ್‌ ಔಟ್‌?

​35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 66 ಶತಕಗಳು ಹಾಗೂ 80 ಅರ್ಧಶತಕಗಳು ಕೂಡ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 21 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪೂಜಾರ ಅವರದ್ದಾಗಿದೆ.