Friday, 22nd November 2024

KMF Milestone: ಕೆಎಂಎಫ್‌ನಿಂದ ಮತ್ತೊಂದು ಮೈಲಿಗಲ್ಲು; ದಿನಕ್ಕೆ 2.5ಕೋಟಿ ಲೀ. ಹಾಲು ಉತ್ಪಾದನೆ

KMF Milk

ಬೆಂಗಳೂರು: ಕೆಎಂಎಫ್(KMF Milestone) ವತಿಯಿಂದ ಪ್ರತಿದಿನ 2.5 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ಕೆಎಂಎಫ್ ಇತಿಹಾಸದಲ್ಲಿಯೇ ಬಹುದೊಡ್ಡ ಮೈಲಿಗಲ್ಲು ಎನ್ನಲಾಗಿದೆ. ಇದರಲ್ಲಿ ಒಂದು ಕೋಟಿ ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟವಾಗುತ್ತಿದ್ದರೆ, ಇನ್ನೊಂದು ಕೋಟಿ ಲೀಟರ್‌ ಹಾಲನ್ನು ಕೆಎಂಎಫ್‌ ಉತ್ಪಾದಿಸುತ್ತದೆ. ಇನ್ನುಳಿದ 50ಸಾವಿರ ಲೀಟರ್‌ ಹಾಲನ್ನು ಖಾಸಗಿ ಡೈರಿಗಳು ಉತ್ಪಾದಿಸುತ್ತದೆ.

ರಾಜ್ಯದಲ್ಲಿ ಶೇ.80ರಷ್ಟು ಕೆಎಂಎಫ್‌ ಬ್ರ್ಯಾಂಡ್‌ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳೇ ಮಾರಾಟವಾಗುತ್ತಿದೆ. ಇನ್ನುಳಿದಂತೆ ದೊಡ್ಡ ದೊಡ್ಡ ಡೈರಿಗಳನ್ನು ನಡೆಸುತ್ತಿರುವ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಮತ್ತೊಂದೆಡೆ ಕೆಎಂಎಫ್‌ ದೇಸಿ ತಳಿಯ ಹಸುಗಳು ಮತ್ತು ಅದರ ಹಾಲನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಭಿಯಾನವನ್ನೂ ನಡೆಸಿದೆ. ಅಲ್ಲದೇ ಗುಜರಾತ್‌ನ ದೇಶಿಯ ʼಗಿರ್‌ʼ ತಳಿಯನ್ನೂ ಪೂರೈಕೆ ಮಾಡಲು ಮುಂದಾಗಿದೆ.

ಇನ್ನು ಈ ಬಗ್ಗೆ ‍ಬಳ್ಳಾರಿಯ ಪಶುವೈದ್ಯರೊಬ್ಬರು ಪ್ರತಿಕ್ರಿಯಿಸಿದ್ದು, ಗುಜರಾತ್‌ನ ಗಿರ್‌ ತಳಿ ಈ ವಾತಾವರಣಕ್ಕೆ ಹೊಸತು. ಅದನ್ನು ಸಾಕಲು ಬಹಳ ಕಷ್ಟ. ರೈತರು ಈ ತಳಿಯ ಹಸುವನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ. ಕೆಎಂಎಫ್‌ನ ಈ ಯೋಜನೆ ವಿಫಲ. ಹಸುಗಳಿಗೆ ಸ್ವತಂತ್ರ, ಉತ್ತಮ, ಶುಚಿಯಾದ ಆಹಾರದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಕೆಎಂಎಫ್‌ ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಸಂಭ್ರಮಾಚರಣೆಯ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ಗೋ ಮಾತೆಗೆ ಪೂಜೆ ಸಲ್ಲಿಸಿದ್ದರು. ಇದರ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ತಿಂಗಳದಲ್ಲಿ ದಿನವೊಂದಕ್ಕೆ 90 ಲಕ್ಷ ಲೀ. ಇತ್ತು. ಈಗ ಒಂದು ಕೋಟಿಗೆ ಹೆಚ್ಚಳವಾಗಿದೆ ಎಂದರು.

ಹಿಂದೆ ಅವರು ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳಿಗೆ ಡೈರಿಯನ್ನು ಹಸ್ತಾಂತರ ಮಾಡಿಕೊಟ್ಟಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅಲ್ಲಿಯವರೆಗೂ ಡೈರಿಗಳು ಹಾಗೂ ಹಾಲು ಒಕ್ಕೂಟಗಳು ಪ್ರತ್ಯೇಕವಾಗಿದ್ದವು. ಹಾಲಿನ ಸೊಸೈಟಿಗಳೂ ಕೂಡ ರೈತರ ಸಂಘಟನೆಗಳೇ ಆಗಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 16000 ಸೊಸೈಟಿಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ಇಷ್ಟು ಹಾಲನ್ನು ಮಾರಾಟ ಮಾಡಬೇಕಿದೆ. ನಾವು ರೈತರಿಗೆ ಹಾಗೂ ಸೊಸೈಟಿಗಳಿಗೆ ಹಾಲು ಬೇಡ ಎನ್ನಲಾಗುವುದಿಲ್ಲ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದಿದ್ದರು.

ಈ ಸುದ್ದಿಯನ್ನೂ ಓದಿ: KMF Nandini: ಫುಟ್ಬಾಲ್‌ ಲೀಗ್‌ಗೂ ನಂದಿನಿ ಪ್ರಾಯೋಜಕತ್ವ?