ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಧೀಕ್ಷೆ ಸುವರ್ಣ ಮಹೋತ್ಸವ
ಬೆಂಗಳೂರು: ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷದ ಸುವರ್ಣ ಮಹೋತ್ಸವ ನಗರದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಇದೇ 26 ರಂದು ನಡೆಯ ಲಿದ್ದು, ಕಲ್ಯಾಣವೃಷ್ಟಿ ಮಹಾಭಿಯಾನದದಡಿ ಏಕಕಾಲಕ್ಕೆ ಎರಡು ಕೋಟಿ “ನಮಃ ಶಿವಾಯ” ಸ್ತೋತ್ರಪಠಣದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಲು ಸಿದ್ಧತೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾದ ನಾಗಾನಂದ, ಎರಡು ಲಕ್ಷಕ್ಕಿಂತ ಹೆಚ್ಚು ಜನ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಹಾಗೂ ಲಕ್ಷ್ಮೀ ನೃಸಿಂಹಕರುಣಾರಸಸ್ತೋತ್ರಗಳನ್ನು ಪಠಿಸಲಿದ್ದಾರೆ.
ವೇದಾಂತ ಭಾರತಿ ಸಂಸ್ಥೆಯಿಂದ ಶಂಕರಾಚಾರ್ಯರ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದು, ಏಕಕಂಠದಲ್ಲಿ ಸ್ತೋತ್ರಗಳು ಮೊಳಗಲಿವೆ. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಈ ಸ್ತೋತ್ರಗಳಲ್ಲಿ ಏಕಾತ್ಮ ಭಾವವಿದ್ದು, ಪಂಚಾಕ್ಷರಿ ಮಹಾಮಂತ್ರವೂ ಬರಲಿದೆ. ಇದರಲ್ಲಿ 27 ಸ್ತೋತ್ರಗಳಿವೆ. ನಾಲ್ಕು ಬಾರಿ ನಮಃಶಿವಾಯ ಜಪಿಸುತ್ತಿದ್ದು, ಇದನ್ನು ಗುಣಿಸಿದರೆ ಎರಡು ಕೋಟಿಗೂ ಅಧಿಕವಾಗಲಿದೆ.
ಹೀಗಾಗಿ ಕಾರ್ಯಕ್ರಮದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೋಟಿ ಸ್ತೋತ್ರ ಜಪ ಮಾಡುವ ಗುರಿ ಹೊಂದಿದ್ದು, ದಾಖಲೆ ನಿರ್ಮಿಸಿ ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸಹ ಭಾಗವಹಿಸುತ್ತಿದ್ದು, ಪ್ರತಿ ಯೊಬ್ಬರಿಗೂ ಡಿಜಿಟಲ್ ಇ ಪ್ರಮಾಣ ಪತ್ರ ನೀಡಲಾಗು ವುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಾಲ್ಗೊಳ್ಳಲಿದ್ದು, ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಶಂಕರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ. ಸೋಮಣ್ಣ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಬೆಂಗಳೂರು ಮಹಾನಗರವನ್ನು 25 ಪ್ರದೇಶಗಳಾಗಿ ವಿಂಗಡಿಸಿದ್ದು ಪ್ರತಿಯೊಂದು ಪ್ರದೇಶಕ್ಕೆ ಒಂದೊಂದು ಅಯೋಧ್ಯೆ ಎಂದು ಹೆಸರಿಸಲಾಗಿದೆ. ಒಟ್ಟಾರೆ ಇಡೀ ಬೆಂಗಳೂರು ನಗರದಾದ್ಯಂತ ಸಹಸ್ರಾರು ಪಾರಾಯಣಕೇಂದ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಆಸ್ತಿಕರು ಹಾಗೂ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾದ ಬಿ.ಸಿ. ಪ್ರಭಾಕರ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆ ಕಾರ್ಮಿಕರು, ದಿವ್ಯಾಂಗರು, ದೃಷ್ಟಿಹೀನರು, ಹಿರಿಯ ನಾಗರಿಕರು ಸೇರಿದಂತೆ ಲಿಂಗ, ವರ್ಣವಯೋಭೇದವಿಲ್ಲದೇ ಸಮಾಜದ ಎಲ್ಲ ಸ್ತರದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಊಟ, ಔಷಧ, ನೀರು ಹೀಗೆ ಪ್ರತಿಯೊಂದು ಸೌಕರ್ಯ ವನ್ನು ಭಕ್ತಾದಿಗಳೇ ಮಾಡಿದ್ದು, 10 ಸಾವಿರ ಜನ ಸ್ವಯಂ ಸೇವಾ ಕಾರ್ಯಕರ್ತರು ಸುವರ್ಣ ಮಹೋತ್ಸವದ ಯಶಸ್ಸಿಗೆ ಹಗರಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: Bangalore University: ವಿಪತ್ತು ನಿರ್ವಹಣಾ ಪಿಜಿಗಿಲ್ಲ ಡಿಮ್ಯಾಂಡ್