Monday, 18th November 2024

Viral Video: ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್

Viral Video

ಉತ್ತರ ಪ್ರದೇಶ: ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬಿಡುವುದು ಈಗಿನವರ ಕ್ರೇಜ್‌. ಅದರ ಮೂಲಕವೇ ಫೇಮಸ್ ಆಗುವುದು ಅದರ ಕನಸು. ರೀಲ್ಸ್‌ ಮಾಡಲು ಸಿಕ್ಕಾಪಟ್ಟೆ  ರಿಸ್ಕ್‌ ತೆಗೆದುಕೊಳ್ಳುತ್ತಾರೆ. ದಿನ ಬೆಳಗಾದರೆ ಸಾಕಷ್ಟು ರೀಲ್ಸ್‌ ಅವಾಂತರ ಸುದ್ದಿಗಳನ್ನು ನೋಡುತ್ತಿರುತ್ತೇವೆ. ಇತ್ತೀಚೆಗೆ ಅಂತಹದ್ದೇ ಒಂದು ಘಟನೆ ನಡೆದಿದೆ. ರೀಲ್ಸ್‌ ಮಾಡಲು ಹೋಗಿ 20 ವರ್ಷದ ಯುವಕನೊಬ್ಬ ತನ್ನ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಗ್ರಾದ ನಮಕ್ ಕಿ ಮಂಡಿ ಪ್ರದೇಶದ ಸರಾಫಾ ಬಜಾರ್‌ನ ಜೋಹರಿ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಆಗ್ರಾದ ತಾಜ್‍ಗಂಜ್‍ನ ಅಬ್ಬಾಸ್ ನಗರದ ನಿವಾಸಿ ಆಸಿಫ್ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಕಬ್ಬಿಣದ ರಾಡ್‌ ಮೇಲೆ ಸ್ಲೋ ಮೋಷನ್‍ನಲ್ಲಿ ಬಂದ ಆಸಿಫ್, ಸ್ವಲ್ಪ ಹಿಂದಕ್ಕೆ ಸರಿದು ಕಬ್ಬಿಣ ಜಾಲರಿಯನ್ನು ಮೇಲೆತ್ತಲು ಹೋಗಿದ್ದಾನೆ.  ಅಷ್ಟರಲ್ಲಿ ಆತ ಆಯತಪ್ಪಿದ ಕೆಳಗೆ ಬಿದ್ದಾಗ ಕಬ್ಬಿಣದ ರಾಡ್‍ ಆತನ ಕುತ್ತಿಗೆಯ ಮೇಲೆ ಬಿದ್ದಿದೆ.  ಕಬ್ಬಿಣದ ರಾಡಿನ ತೀಕ್ಷ್ಣವಾದ ಅಂಚು ಅವನ ಶಿರವನ್ನು ಕತ್ತರಿಸಿದ್ದ ಇದರಿಂದ ಆತ ಅಲ್ಲೇ ಭೀಕರವಾಗಿ ಮೃತಪಟ್ಟಿದ್ದಾನೆ.

ವರದಿಗಳ ಪ್ರಕಾರ, ಸರಾಫ್ ಬಜಾರ್‌ನಲ್ಲಿ ಬೆಳ್ಳಿ ಆಭರಣಗಳ ಅಂಗಡಿಯಲ್ಲಿ ಕೆಲಸ ಮಾಡುವ ಆಸಿಫ್ ಸೇರಿದಂತೆ ನಾಲ್ವರು ಯುವಕರು ಸೇರಿ ಜೊಹರಿ ಕಾಂಪ್ಲೆಕ್ಸ್‌ನಲ್ಲಿ ಎರಡು ಕಟ್ಟಡಗಳ ಮಧ್ಯೆ ಕಬ್ಬಿಣದ ರಾಡ್‌ ಹಾಕಿ ಜೋಡಣೆ ಮಾಡಲಾದ ಪ್ರದೇಶದಲ್ಲಿ ರೀಲ್ಸ್ ಮಾಡಿದ್ದಾರೆ.  ಆ ವೇಳೆ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಕೆಳಗೆ ಬಿದ್ದ ಆಸಿಫ್‍ನನ್ನು ಯುವಕರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲೇ ಚಕ್ಕಂದವಾಡಿದ ಬಾಬಾ! ವಿಡಿಯೊ ನೋಡಿ ಜನಾಕ್ರೋಶ

ಈ ವಿಚಾರ ಆಸಿಫ್ ಕುಟುಂಬಕ್ಕೆ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ಆತನ ಮನೆಯವರು ಶವದ ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಲ್ಲದೇ ಪೊಲೀಸ್ ಕೇಸ್ ದಾಖಲಿಸದೆ ಆಸಿಫ್  ದೇಹವನ್ನು ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.