Friday, 22nd November 2024

Supreme Court: 8, 9, 10ನೇ ತರಗತಿಗಳ ಬೋರ್ಡ್‌ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ

Supreme Court

ನವದೆಹಲಿ: ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ (Board Exams) ಫಲಿತಾಂಶಗಳನ್ನು ಪ್ರಕಟಿಸದಂತೆ ಕರ್ನಾಟಕ ಸರಕಾರಕ್ಕೆ (Karnataka Government) ಸುಪ್ರೀಂ ಕೋರ್ಟ್‌ (Supreme Court) ನಿರ್ಬಂಧ ವಿಧಿಸಿದೆ.

ಕರ್ನಾಟಕದಲ್ಲಿ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ಚಂದ್ರ ಶರ್ಮಾ ಅವರ ಪೀಠ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಿ? ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಕಲ್ಯಾಣದ ಬಗ್ಗೆ ಕಾಳಜಿ ಇದ್ದ ರೆ, ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ಅವರನ್ನು ಪೀಡಿಸಬೇಡಿ ಎಂದು ಕರ್ನಾಟಕ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಪೀಠ ಹೇಳಿದೆ.

ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಕಾಮತ್ ಹೇಳಿದರು. ಇತರ 24 ಜಿಲ್ಲೆಗಳಲ್ಲಿಯೂ ಪರೀಕ್ಷೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರ ವಿವರಗಳನ್ನು ನೀಡುವ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಚ್ 22 ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಹೈಕೋರ್ಟ್ ವಿಭಾಗೀಯ ಪೀಠವು 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದು, ಏಕ ನ್ಯಾಯಾಧೀಶರ ಪೀಠದ ಮಾರ್ಚ್ 6 ರ ಆದೇಶವನ್ನು ತಳ್ಳಿಹಾಕಿತ್ತು. ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಮೂಲಕ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಅಕ್ಟೋಬರ್ 2023 ರ ನಿರ್ಧಾರವನ್ನು ಹೈಕೋರ್ಟ್‌ನ ಏಕ ನ್ಯಾಯಾಧೀಶರು ರದ್ದುಗೊಳಿಸಿದ್ದರು.

ಇದನ್ನೂ ಓದಿ: Primary School Exam : ಈ ಬಾರಿಯೂ 5,8,9ನೇ ತರಗತಿಗೆ ಬೋರ್ಡ್‌ ಪರೀಕ್ಷೆ ಇಲ್ಲ; ಮೌಲ್ಯಾಂಕ ನಡೆಸಲು ಆದೇಶ