Friday, 22nd November 2024

Prajwal Revanna Case: ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣಗೆ ಬಿಗ್‌ ಶಾಕ್‌; 3 ಜಾಮೀನು ಅರ್ಜಿ ವಜಾ!

Prajwal Revanna Case

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna Case) ಮತ್ತೆ ಹಿನ್ನಡೆಯಾಗಿದೆ. ಅವರು ಸಲ್ಲಿಸಿದ್ದ ಒಂದು ಜಾಮೀನು ಹಾಗೂ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇನ್ನೊಂದು ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಸಂಬಂಧ ಪ್ರತ್ಯೇಕವಾಗಿ 4 ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪೈಕಿ ಮೂರು ಪ್ರಕರಣಗಳಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ವಜಾ ಮಾಡಿದೆ.

ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ಮನೆಕೆಲಸದಾಕೆ ನೀಡಿರುವ ದೂರಿನ ಅನ್ವಯ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದರು. ಈ ಪ್ರಕರಣದಲ್ಲಿ ಪ್ರಜ್ವಲ್‌ ಎರಡನೇ ಆರೋಪಿಯಾಗಿದ್ದಾರೆ. ಮೊದಲನೇ ಆರೋಪಿಯಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ಈಗಾಗಲೇ ಜಾಮೀನು ಮಂಜೂರಾಗಿದೆ.

ಹೊಳೆನರಸೀಪುರದ ಸೂರಜ್‌ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿನ ಕೆಲಸದಾಕೆಯ ದೂರಿನ ಅನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣ ಮತ್ತು ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕಲ್ಪಿಸುವ ನೆಪದಲ್ಲಿ ಹಾಸನದ ಮಹಿಳೆಯ ನಗ್ನ ಚಿತ್ರ, ವಿಡಿಯೊ ಸೆರೆ ಹಿಡಿದ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಪ್ರಜ್ವಲ್‌ ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಈ ಎರಡೂ ಪ್ರಕರಣಗಳು ಬೆಂಗಳೂರಿನ ಸಿಐಡಿ ಸೈಬರ್‌ ಠಾಣೆಯಲ್ಲಿ ದಾಖಲಾದ್ದವು.

ಈ ಸುದ್ದಿಯನ್ನೂ ಓದಿ | Muda Case: ರಾಕೇಶ್ ಸಿದ್ದರಾಮಯ್ಯ ಸಾವಿಗೆ ದರೋಡೆಕೋರ ಬೈರತಿ ಸುರೇಶ್‌ ಕಾರಣ: ಶೋಭಾ ಕರಂದ್ಲಾಜೆ ಆರೋಪ!

ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಇನ್ನೆರಡು ದಿನದಲ್ಲಿ ಪ್ರಕಟಿಸುವುದಾಗಿ ಕೋರ್ಟ್‌ ಹೇಳಿದೆ.