ಅಗತ್ಯ ಜಾಗ ಮಂಜೂರು ಮಾಡಿ
ಸಾರಿಗೆ ಇಲಾಖೆ ಮನವಿ
ಸೋಮನಾಥ ಸಂಜೀವ, ತಿಪಟೂರು
ಚಾಲನಾ ಪರವಾನಗಿ ವಿತರಿಸುವಲ್ಲಿ ಆರ್ ಟಿ ಒ ಅಧಿಕಾರಿಗಳು ಚಾಲಕರಿಗೆ ಸರಿಯಾಗಿ ಪರೀಕ್ಷೆ ನಡೆಸದೆ ಡಿಎಲ್ ವಿತರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಲೂಕಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯು ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕುಗಳನ್ನು ಒಳಗೊಂಡಿದ್ದು, ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಡಿಎಲ್ ವಿತರಿಸುವಲ್ಲಿ ನಿಯಮಗಳನ್ನು ಪಾಲಿಸುವುದರಲ್ಲಿ ಯಶಸ್ವಿ ಯಾಗಿದೆ. ಈ ಪರವಾನಗಿ ವಿತರಿಸುವ ಸಮಯದಲ್ಲಿ ಸಾರಿಗೆ ಇಲಾಖೆ ಅನುಸರಿಸಬೇಕಾದ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸದೆ, ಸರಿಯಾಗಿ ಪರೀಕ್ಷೆಗಳನ್ನು ನಡೆಸದೇ ಲೋಪ ದೋಷಗಳು ಕಂಡು ಬರುತ್ತಿವೆ. ಅರ್ಹತೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಚಾಲನ ಪರವಾನಗಿ ವಿತರಿಸಲಾಗುತ್ತಿದೆ.
ಕೆಲವೊಂದು ಅಪಘಾತಗಳಿಗೆ ಅಧಿಕಾರಿಗಳೇ ಪರೋಕ್ಷ ಕಾರಣರಾಗುತ್ತಾರೆ ಎಂದರೂ ತಪ್ಪಿಲ್ಲ. ಜಿಲ್ಲಾ ಕೇಂದ್ರಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ತಿಪಟೂರಿನಲ್ಲಿ ಸಾರಿಗೆ ಇಲಾಖೆಯು ತರಬೇತಿ ಪಡೆದವನು ಸರಿಯಾಗಿ ತರಬೇತಿ ಪಡೆದಿದ್ದಾನೆಯೇ ಎಂದು ಪರೀಕ್ಷಿಸಲು ಬೇಕಿರುವ ನಿಗದಿತ ಜಾಗ ( ಡಿಎಲ್ ಟೆಸ್ಟಿಂಗ್ ಟ್ರ್ಯಾಕ್ ) ಇಲ್ಲದಿರುವುದು ಮುಖ್ಯ ಕಾರಣ. ಸಾರಿಗೆ ಇಲಾಖೆಯ ನಿಯಮಾನುಸಾರ ಡಿಎಲ್ ವಿತರಿಸುವ ಅಧಿಕಾರಿಯು ತರಬೇತಿ ಪಡೆದವನ ಪಕ್ಕ ಕುಳಿತು ಬಹಳಷ್ಟು ಪರೀಕ್ಷೆಗಳನ್ನು ನಡೆಸಬೇಕು. ಸಂಪೂರ್ಣವಾಗಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ವಿತರಿಸಬೇಕಾಗುತ್ತದೆ.
ಕೆಲವೊಂದಷ್ಟು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಸಾರಿಗೆ ಅಧಿಕಾರಿಗಳು ಡಿಎಲ್ ವಿತರಿಸುವ ಮುನ್ನ ಕೆಲವೊಂದಷ್ಟು ಕಠಿಣ ಪರೀಕ್ಷೆಗಳನ್ನು ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗ ದಿದ್ದರೆ ಡಿಎಲ್ ಕೊಡುವುದನ್ನು ನಿರಾಕರಿಸುತ್ತಾರೆ. ಈ ಕಾರಣ ಕೆಲವೊಂದಷ್ಟು ಜನ ತಮ್ಮ ಆಧಾರ್ ಕಾರ್ಡಿನ ವಿಳಾಸ ಸ್ಥಳೀಯವಾಗಿ ಬದಲಾಯಿಸಿ, ಡಿಎಲ್ ಪಡೆಯುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವಿಶೇಷವೇನೆಂದರೆ ತಿಪಟೂರು ಎಆರ್ಟಿಓ ಕಚೇರಿ ಹಿಂಭಾಗ ಇರುವ 10 ಗುಂಟೆ ಜಾಗದಲ್ಲಿ ಟು ವೀಲರ್ ತರಬೇತಿ ಪಡೆದವನು ಒಂದು ರೌಂಡ್ ಹೋಗಿ ಬಂದರೆ ಸಾಕು ಪಾಸ್ ಆಗುತ್ತಾನೆ. ಎಲ್ ಎಂ ವಿ ಮತ್ತು ಹೆವಿ ವೆಹಿಕಲ್ಸ್ ಗಳ ತರಬೇತಿ ಪಡೆದಾತ ಮುಂಭಾಗಕ್ಕೆ ಚಲಿಸಿ, ಅದೇ ರೀತಿ ಹಿಂಭಾಗಕ್ಕೆ ಚಲಾಯಿಸಿ, ಗಾಡಿ ತಂದು ನಿಲ್ಲಿಸಿದರೆ ಸಾಕು, ಡಿಎಲ್ ವಿತರಿಸುತ್ತಾರೆಂಬ ಆರೋಪ ಕೂಡ ಇದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಸಚಿವರು, ತಾಲೂಕಿನ ಶಾಸಕರು ಮತ್ತು ಸಾರಿಗೆ ಅಽಕಾರಿಗಳು ಸಮಾಲೋಚನೆ ನಡೆಸಿ ಡಿಎಲ್ ಟ್ರ್ಯಾಕ್ ನಡೆಸುವುದಕ್ಕೆ ಅಗತ್ಯವಾದ ವಿಶಾಲ ಜಾಗವನ್ನು ಮಂಜೂರು ಮಾಡಬೇಕಿದೆ. ಹಾಗೇ ಪರೀಕ್ಷೆ ನಡೆಸುವ ಜಾಗಕ್ಕೆ ಬೇಕಿರುವ ಸವಲತ್ತು ಒದಗಿಸುವುದು ಒಳಿತು ಎನ್ನುತ್ತಾರೆ ಸ್ಥಳೀಯರು.
ಡಿಎಲ್ ಟ್ರ್ಯಾಕ್ ಮತ್ತು ಇಲಾಖೆಯ ಅನುಕೂಲಕ್ಕಾಗಿ 4 ಎಕರೆ ಜಾಗ ಅವಶ್ಯಕತೆ ಇದೆ. ಸರಕಾರದಿಂದ ಭೂಮಿ ಮಂಜೂರಾದರೆ ಸಾಕು, ಅದಕ್ಕೆ ಬೇಕಿರುವ ಸವಲತ್ತುಗಳನ್ನು ನಮ್ಮ ಇಲಾಖೆಯೇ ಒದಗಿಸುತ್ತದೆ.
-ಭಗವಾನ್ ದಾಸ್. ಎಆರ್ಟಿಒ, ತಿಪಟೂರು
ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸದೆ ಡಿಎಲ್ ವಿತರಿಸುತ್ತಿರುವುದು ಸರಿಯಲ್ಲ, ಇದರಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಚಾಲನಾ ತರಬೇತಿ ಪಡೆದವರಿಗೆ ಡ್ರೈವಿಂಗ್ ಟೆಸ್ಟ್ ನಡೆಸಲು ತಿಪಟೂರಿನಲ್ಲಿ ಜಾಗವೇ ಇಲ್ಲ, ಸರಕಾರ ಆದಷ್ಟು ಬೇಕು ಈ ಸಮಸ್ಯೆ ಬಗೆಹರಿಸಬೇಕಿದೆ. -ಬಸವರಾಜು, ಸ್ಥಳೀಯರು