Thursday, 24th October 2024

S Jaishankar: ಏರ್‌ ಇಂಡಿಯಾ ಪ್ರಯಾಣಿಕರಿಗೆ ಗುರುಪತ್ವಂತ್ ಸಿಂಗ್ ಪನ್ನುನ್‌ ಬೆದರಿಕೆ; ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದೇನು?

S Jaishankar

ಹೊಸದಿಲ್ಲಿ: ಖಲಿಸ್ತಾನಿ ಉಗ್ರ (Khalistan Terrorist) ಗುರುಪತ್ವಂತ್ ಸಿಂಗ್ ಪನ್ನುನ್‌ (Gurpatwant Singh Pannun) ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ (Air India) ವಿಮಾನಗಳಲ್ಲಿ ಹಾರಾಟ ನಡೆಸದಂತೆ ಬೆದರಿಕೆ ಹಾಕಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ, ಬೆದರಿಕೆ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ತಿಳಿಸಿದ್ದಾರೆ. ಆ ಮೂಲಕ ಆತಂಕ ನಿವಾರಣೆಗೆ ಮುಂದಾಗಿದ್ದಾರೆ. ಎನ್‌ಡಿಟಿವಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ ಈ ವಿಚಾರ ಹಂಚಿಕೊಂಡಿದ್ದಾರೆ (NDTV World Summit).

ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಹಾರಾಟ ನಡೆಸದಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸೋಮವಾರ (ಅಕ್ಟೋಬರ್‌ 21) ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ. 1984ರ ಸಿಖ್‌ ವಿರೋಧಿ ದಂಗೆ ಮತ್ತು ಹತ್ಯಾಕಾಂಡಕ್ಕೆ ನಡೆದು 40 ವರ್ಷ ಸಂದಿರುವ ಹಿನ್ನೆಲೆ ಭಾರೀ ದಾಳಿಗೆ ಖಲಿಸ್ತಾನಿ ಉಗ್ರರು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಇದೇ ದಿನ ಇಂಹದ್ದೇ ಒಂದು ಎಚ್ಚರಿಕೆಯನ್ನು ಕೆನಡಾದಲ್ಲಿರುವ ಗುರುಪತ್ವಂತ್‌ ಸಿಂಗ್‌ ನೀಡಿದ್ದ.

ಕೆಲವು ದಿನಗಳಿಂದ ಭಾರತದ ವಿಮಾನಗಳಿಗೆ ಬಾಂಬ್‌ ಕರೆ ಬರುತ್ತಲೇ ಇದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗುರುಪತ್ವಂತ್ ಸಿಂಗ್ ಎಚ್ಚರಿಕೆ ಪ್ರಯಾಣಿಕರಲ್ಲಿ ಕಳವಳವನ್ನುಂಟು ಮಾಡಿದೆ. ಒಂದು ವಾರದಲ್ಲಿ ವಿಮಾನಗಳಿಗೆ ಸುಮಾರು 100 ಬೆದರಿಕೆ ಬಂದಿದೆ.

ಜೈಶಂಕರ್‌ ಹೇಳಿದ್ದೇನು?

ʼʼಗುರುಪತ್ವಂತ್ ಸಿಂಗ್ ಪನ್ನುನ್‌ನಿಂದ ಇಂದು ಬಂದಿರುವ ಬೆದರಿಕೆಯ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಆದರೆ ಕೆಲವು ದಿನಗಳ ಹಿಂದೆ ಸಾಕಷ್ಟು ಬೆದರಿಕೆ ಬಂದಿವೆ. ಈ ಹಿಂದೆ ನಮ್ಮ ವಿಮಾನಯಾನ ಸಂಸ್ಥೆ, ಸಂಸತ್ತು, ಹೈ ಕಮಿಷನ್‌, ವಿವಿಧ ಮುಖಂಡರಿಗೆ ಬೆದರಿಕೆ ಬಂದಿವೆ. ಇವೆಲ್ಲ ಕಳವಳದ ಸಂಗತಿʼʼ ಎಂದು ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ.

ಜೈಶಂಕರ್ ಅವರು ಬೆದರಿಕೆಯ ವಿಚಾರವನ್ನು ತಳ್ಳಿ ಹಾಕಿದ್ದರೂ, ಕೆನಡಾದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎನ್ನುವ ಕೆನಡಾದ ಆಧಾರರಹಿತ ಆರೋಪಕ್ಕೆ ಜೈಶಂಕರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮ

2023ರ ನವೆಂಬರ್‌ನಲ್ಲಿ ಪನ್ನುನ್, ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲಾಗುವುದು ಮತ್ತು ನವೆಂಬರ್ 19ರಂದು ಮುಚ್ಚಲಾಗುವುದು ಎಂದು ಹೇಳುವ ವಿಡಿಯೊವನ್ನು ಬಿಡುಗಡೆ ಮಾಡಿದ್ದ. ಅಲ್ಲದೇ ಆ ದಿನ ಏರ್ ಇಂಡಿಯಾದಲ್ಲಿ ಹಾರಾಟ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದ. ಇನ್ನು ಪನ್ನುನ್‌ ಇದೀಗ ಮತ್ತೆ ದಾಳಿಯ ಬೆದರಿಕೆಯೊಡ್ಡಿರುವ ಹಿನ್ನೆಲೆ ಅಲರ್ಟ್‌ ಆಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು(NIA) ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನೂ ಓದಿ: Gurpatwant Singh Pannun: ನ.1 ರಿಂದ 19ರವರೆಗೆ ವಿಮಾನ ಪ್ರಯಾಣ ಮಾಡ್ಬೇಡಿ; ಖಲಿಸ್ತಾನಿ ಉಗ್ರನಿಂದ ಬೆದರಿಕೆ-ಡೆಡ್ಲಿ ಅಟ್ಯಾಕ್‌ಗೆ ಸಂಚು?